ಮದುವೆ ಭರವಸೆ ಉಲ್ಲಂಘನೆ ಅತ್ಯಾಚಾರ ಆರೋಪದಡಿ ವಿಚಾರಣೆ ನಡೆಸಲಾಗದು
ಬೆಂಗಳೂರು, ಜೂನ್ 12: ವಿವಾಹವಾಗುವುದಾಗಿ ನೀಡಿದ್ದ ಭರವಸೆ ಉಲ್ಲಂಘಿಸಿದ ಪ್ರಕರಣವನ್ನು ಅತ್ಯಾಚಾರ ಆರೋಪದಲ್ಲಿ ವಿಚಾರಣೆಗೆ ಒಳಪಡಿಸುವುದು ಅವಿವೇಕತನ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡುವುದು, ಅತ್ಯಾಚಾರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಮೆರಿಕಾದಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಸಂತೋಷ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಪಟ್ಟಿದೆ.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಸಂತೋಷ್ ಶೆಟ್ಟಿ ವಿದೇಶಕ್ಕೆ ತೆರಳಿದ ಬಳಿಕ ದೂರುದಾರ ಮಹಿಳೆಯೊಂದಿಗೆ ಹಲವು ದಿನಗಳ ಕಾಲ ವಾಟ್ಸಪ್ ಸಂಭಾಷಣೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಚರ್ಚಿಸಿಲ್ಲ.
ದೂರುದಾರರು ಮತ್ತು ಅರ್ಜಿದಾರರ ನಡುವೆ ಹಲವು ವ್ಯತ್ಯಾಸಗಳು ಕಂಡುಬಂದಿದ್ದು, ಇದೇ ಕಾರಣದಿಂದ ನಿಶ್ಚಿತಾರ್ಥವೂ ಮುರಿದು ಬಿದ್ದಿರುತ್ತದೆ. ಪ್ರಕರಣದಲ್ಲಿ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿಲ್ಲ. ಮದುವೆಯಾಗುವುದಾಗಿ ತಿಳಿಸಿದ್ದು, ಕಾರಣಾಂತರಗಳಿಂದ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ.
ಕಾರಣಾಂತರಗಳಿಂದ ವಿವಾಹ ಮುರಿದು ಬಿದ್ದಿದೆ. ಆದರೆ, ಅರ್ಜಿದಾರರ ಕುಟುಂಬ ದೂರುದಾರರಿಗೆ ಮದುವೆಗಾಗಿ ಯಾವುದೇ ರೀತಿಯಲ್ಲಿಯೂ ಅಮಿಷ ನೀಡಿಲ್ಲ. ಮದುವೆಗೂ ಮುನ್ನ ಆಗಿರುವ ನಿಶ್ಚಿತಾರ್ಥವೂ ಮುರಿದು ಬಿದ್ದಿಗೆ ಪರಿಣಾಮ ವಿವಾಹರದ್ದಾಗಿದೆ.
ಆದ್ದರಿಂದ ಈ ಪ್ರಕರಣ ವಂಚನೆ ಆರೋಪದಲ್ಲಿಯೂ ಬರುವುದಿಲ್ಲ. ಆದ್ದರಿಂದ ಪ್ರಕರಣದ ಮುಂದುವರಿಕೆಗೆ ಅವಕಾಶ ನೀಡಿದಲ್ಲಿ ಕಾನೂನಿನ ದುರುಪಯೋಗವಾಗಲಿದೆ ಎಂದು ತಿಳಿಸಿರುವ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದ್ದು, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅಮೆರಿಕಾದ ನ್ಯೂಜೆರ್ಸಿಯಲ್ಲಿ ರಾಯಲ್ ಕೆರಾಬಿಯಾಮ್ ಗ್ರೂಪ್ ಇಂಟರ್ ನ್ಯಾಷನಲ್ ಶಿಪ್ಪಿಂಗ್ ಕಂಪೆನಿಯಲ್ಲಿ ಮೇಲ್ವಿಚಾರಕಾಗಿ ಸೇವೆ ಸಲ್ಲಿಸುತ್ತಿದ್ದ ಸಂತೋಷ್ ಶೆಟ್ಟಿ ಎಂಬುವರು ಶೆಟ್ಟಿ ಮ್ಯಾಟ್ರಿಮೋನಿಯಲ್ ಎಂಬ ವೆಬ್‌ಸೈಟ್‌ನಲ್ಲಿ ತಮ್ಮ ವಿವರವನ್ನು ಸಲ್ಲಿಸಿದ್ದರು. ನಂತರ ಅವರ ಸಂಪರ್ಕಕ್ಕೆ ಕುಂದಾಪುರ ತಾಲೂಕಿನ ಮಹಿಳೆಯೊಬ್ಬರು ಬಂದಿದ್ದು, ಇಬ್ಬರೂ ಮಾತಕತೆ, ಚರ್ಚೆಗಳನ್ನು ಮುಂದುವರೆಸಿದ್ದರು.
2023ರ ಜನವರಿ 8 ರಂದು ಹಕ್ಲಾಡಿಯ ದೇವಾಲಯದಲ್ಲಿ ಭೇಟಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಬಳಿಕ ಅರ್ಜಿದಾರರು ಮತ್ತು ದೂರುದಾರರ ಕುಟುಂಬದ ನಡುವೆ ಮಾತುಕತೆಗಳು ನಡೆದಿದ್ದು, ಮದುವೆಯ ಪ್ರಸ್ತಾಪ ಬಂದು ಎರಡೂ ಕುಟಂಬಗಳ ಸದಸ್ಯರು ಒಪ್ಪಿ2023ರ ಜನವರಿ 11ರಂದು ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಡೆಸಿದ್ದರು.
2023ರ ಜನವರಿ 11 ರಂದು ದೂರುದಾರರು ಹಣ ಗಳಿಸುವ ನಿಧಿಯಲ್ಲಿ ಹೂಡಿಕೆ ಮಾಡಲು 4 ಲಕ್ಷ ರೂ. ಗಳನ್ನು ನೀಡುವಂತೆ ಕೇಳಿದ್ದರು, ಇದಕ್ಕೆ ಅರ್ಜಿದಾದರು ತಕ್ಷಣ ವರ್ಗಾವಣೆ ಮಾಡಿದ್ದರು. ಬಳಿಕ ಅರ್ಜಿದಾರರು ನ್ಯೂಜೆರ್ಸಿಗೆ ಹಿಂದಿರುಗಿದರು. ಕುಟುಂಬಗಳ ನಡುವೆ ಏಳು ತಿಂಗಳ ಕಾಲ ಮಾತುಕತೆ ಮುಂದುವರೆದಿತ್ತು. ಅರ್ಜಿದಾರರ ಕುಟುಂಬದ ಸದಸ್ಯರ ಭರವಸೆ ನಂಬಿ ವಿವಾಹಕ್ಕೆ ಆಹ್ವಾನ ಪತ್ರಗಳನ್ನು ಮುದ್ರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಮದುವೆ ನಿಶ್ಚಯವು ರದ್ದಾಗಿತ್ತು.
ಇದಾದ ಬಳಿಕ ಮಹಿಳೆ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಅರ್ಜಿದಾರ ಸಂತೋಷ್ ಶೆಟ್ಟಿ ನಿಶ್ಚಿತಾರ್ಥದ ದಿನ ಸಂಜೆ ಆರು ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನನ್ನ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಅತ್ಯಾಚಾರ ಆರೋಪದಲ್ಲಿ ದೂರು ದಾಖಲಿಸಿದ್ದರು.
ಅಲ್ಲದೆ, ಸಂತೋಷ್ ಶೆಟ್ಟಿ ಕುಟುಂಬಸ್ಥರ ವಿರುದ್ಧ ಸಂತೋಷ್ ಶೆಟ್ಟಿಯೊಂದಿಗೆ ವಿವಾಹ ಮಾಡುವುದಾಗಿ ಭರವಸೆ ನೀಡಿ ಬಳಿಕ ನಿರಾಕರಿಸಿದ್ದಾರೆ ಎಂದು ವಂಚನೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಕುರಿತು ತನಿಖೆ ನಡೆಸಿದ್ದ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications