Mangaluru Submerge: ಮುಳುಗುತ್ತೆ ಮಂಗಳೂರು ಮತ್ತು ಉಡುಪಿ: ಹೊಸ ಅಧ್ಯಯನ ಎಚ್ಚರಿಕೆ!
ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಪ್ರವಾಹದಂತಹ ಘಟನೆಗಳು ಜನರಲ್ಲಿ ಭೀತಿಯನ್ನು ಹೆಚ್ಚಿಸುತ್ತಿವೆ. ಈ ಮಧ್ಯೆ ಹೊಸ ಅಧ್ಯಯನದ ವರದಿಯೊಂದು ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಈ ವರದಿಯಲ್ಲಿ ಕರ್ನಾಟಕದ ಕರಾವಳಿ ನಗರಗಳು ಹಾಗೂ ಸಮುದ್ರ ಭಾಗದ ಪ್ರದೇಶಗಳು ಮುಳುಗುವ ಎಚ್ಚರಿಕೆಯನ್ನು ನೀಡಲಾಗಿದೆ. ಇದರಲ್ಲಿ ಮಂಗಳೂರು ಮತ್ತು ಉಡುಪಿ ಭವಿಷ್ಯ ಆತಂಕ ಮೂಡಿಸುವಂತಿದೆ.
ಇತ್ತೀಚೆಗೆ ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಹೊಸ ಸಂಶೋಧನೆಯೊಂದನ್ನು ಮಾಡಿದೆ. ಅವರ ವರದಿ ಪ್ರಕಾರ, ಕಾಲ ಕಳೆದಂತೆ ಸಮುದ್ರ ಮಟ್ಟ ಹೆಚ್ಚುತ್ತಿದ್ದು, ಪಶ್ಚಿಮ ಕರಾವಳಿ ನಗರಗಳು ಮುಳುಗುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 2040ರ ವೇಳೆಗೆ ಮಂಗಳೂರು ಮತ್ತು ಉಡುಪಿಯಲ್ಲಿ ಶೇ.5ರಷ್ಟು ಭೂಮಿ ಮುಳುಗಡೆಯಾಗಬಹುದು ಎಂದು ಹೇಳಲಾಗಿದೆ.

ಇತ್ತೀಚೆಗೆ ಬೆಂಗಳೂರಿನ ವಿಜ್ಞಾನಿಗಳ ತಂಡ ಸಂಶೋಧನೆಗಾಗಿ ಕರಾವಳಿ ಭಾಗಗಳಿಗೆ ಭೇಟಿ ನೀಡಿತ್ತು. ಈ ವೇಳೆ ಸಮುದ್ರ ಕರಾವಳಿ ಪ್ರದೇಶಗಳನ್ನು ಅತಿಕ್ರಮಿಸಿರುವುದು ಕಂಡು ಬಂದಿದೆ. ಅಲೆಗಳು ಹೆಚ್ಚಾದಗಲೆಲ್ಲ ದಡದ ಸಮೀಪವಿರುವ ಮನೆಗಳಿಗೆ ಅಲೆಗಳು ಬಂದು ಅಪ್ಪಳಿಸುವುದು ಕಂಡು ಬಂದಿದೆ.
ವರ್ಷಗಳ ಹಿಂದೆ ನಿರ್ಮಾಣವಾದ ಸಮುದ್ರ ತೀರದ ಮನೆಗಳು ಅಲೆಗಳಿಂದ ಅಧಿಕ ಅಂತರದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೀಗ ಅಲೆಗಳು ಬಹು ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಮನೆಗಳಿಗೆ ಅಪ್ಪಳಿಸುತ್ತಿವೆ. ಹೀಗಾಗಿ ಸಮುದ್ರವು ಪ್ರತಿ ವರ್ಷ ಗಾತ್ರದಲ್ಲಿ ವಿಸ್ತರಿಸುತ್ತಿದೆ ಎಂದು ವರದಿಯಾಗಿದೆ. ಈ ವರದಿಯು ಆ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಬೆಚ್ಚಿ ಬೀಳಿಸಿದೆ.

ವರದಿಗಳ ಪ್ರಕಾರ, ಈ ಸಂಶೋಧನೆಯನ್ನು ಬೆಂಗಳೂರಿನ ವಿಜ್ಞಾನ, ತಂತ್ರಜ್ಞಾನ ಮತ್ತು ಅಧ್ಯಯನ ಕೇಂದ್ರವು ಮಾಡಿದೆ. ಈ ಅಧ್ಯಯನದಲ್ಲಿ ಹವಾಮಾನ ಬದಲಾವಣೆ ಮತ್ತು ಕರಾವಳಿಯುದ್ದಕ್ಕೂ ಮಾನವ ಅಪಾಯಗಳನ್ನು ಎತ್ತಿ ತೋರಿಸಲಾಗಿದೆ. ಹೆಚ್ಚುತ್ತಿರುವ ಸಮುದ್ರ ಮಟ್ಟ ಹಲವಾರು ವಸತಿ ಮತ್ತು ಕೃಷಿ ಪ್ರದೇಶಗಳನ್ನು ಆಕ್ರಮಿಸಿದೆ.
ಇದು ಮುಂದಿನ ದಿನಗಳಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು ಎಂದು ವಿಜ್ಞಾನಿ ಎಚ್ಚರಿಸಿದ್ದಾರೆ. ಸಮುದ್ರ ಮಟ್ಟದಲ್ಲಿನ ಏರಿಕೆಯನ್ನು ಸಮುಗ್ರವಾಗಿ ತನಿಖೆ ಮಾಡಿದ ತಂಡ, ಪ್ರಸ್ತುತ ಅಲೆಗಳ ಅಂತರ ಹಾಗೂ ಹಿಂದಿನ ಡೇಟಾವನ್ನು ವಿಶ್ಲೇಷಿಸಿ ಅಂತಿಮ ವರದಿಯನ್ನು ಸಿದ್ಧಪಡಿಸಿದೆ. ಇದು ಭವಿಷ್ಯದಲ್ಲಿ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ವರದಿ ಹೇಳಿದೆ.
ಈ ವರದಿ ಆಧರಿಸಿ ಹಿರಿಯ ವಿಜ್ಞಾನಿ, ಪ್ರೊಫೆಸರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಕ್ಷರು ಡಾ.ಕೆ.ಎಸ್. ಜಯಪ್ಪ ಸಂಭಾವ್ಯ ಅಪಾಯಗಳ ಕುರಿತು ವರದಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, "ಕಡಲತೀರಗಳಲ್ಲಿ ತಡೆಗೋಡೆಗಳು, ಕಟ್ಟಡಗಳನ್ನ ದಾಟಿ ಅಲೆಗಳು ಬರುತ್ತಿವೆ. ಕರಾವಳಿ ಸವೆತವನ್ನು ತಡೆಗಟ್ಟಲು ಕಲ್ಲಿನ ರಾಶಿಗಳು ಸಮುದ್ರದ ದಿಕ್ಕನ್ನು ಬದಲಾಯಿಸುತ್ತಿವೆ. ಸಮುದ್ರ ಮಟ್ಟವು ಮೊದಲಿಗಿಂತ ಹೆಚ್ಚು ಭೂಮಿಯ ಮೇಲೆ ಪರಿಣಾಮ ಬೀರುತ್ತಿದೆ. ಮಂಗಳೂರಿನ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಮತ್ತು ಸಸಿಹಿತ್ಲು ಪ್ರದೇಶಗಳಲ್ಲಿ ಗಮನಾರ್ಹವಾದ ಭೂಸವೆತವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು'' ಎಂದು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ, ಕೇರಳ, ಗೋವಾ ಮತ್ತು ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿ ಇದೇ ರೀತಿಯ ಬದಲಾವಣೆಗಳು ಸಂಭವಿಸಬಹುದು ಎಂದು ಅಧ್ಯಯನ ಸೂಚಿಸುತ್ತದೆ. ವರದಿಯ ಪ್ರಕಾರ ಮುಂಬೈ, ಪಾಂಡಿಚೇರಿ ಮತ್ತು ಟುಟಿಕೋರಿನ್‌ನಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಭೂಮಿ ಸಮುದ್ರದಲ್ಲಿ ಮುಳಗಬಹುದು ಎಂದಿದೆ.
ಒಟ್ಟಾರೆಯಾಗಿ ಪರಿಸರ ಅಸಮತೋಲನ ಮತ್ತು ಪರಿಸರವನ್ನು ಸರಿಯಾಗಿ ಸಂರಕ್ಷಿಸದ ಕಾರಣ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾಗಬಹುದು ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.











Click it and Unblock the Notifications