ಶ್ರೀ ಕ್ಷೇತ್ರ ಧರ್ಮಸ್ಥಳದ ಮಾನಹಾನಿಗೆ ಕೋರ್ಟ್ ಬ್ರೇಕ್
ಧರ್ಮಸ್ಥಳ/ಮಂಗಳೂರು, ಅ 16: ಶ್ರೀಕ್ಷೇತ್ರ ಧರ್ಮಸ್ಥಳ, ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಶಿಕ್ಷಣ ಸಂಸ್ಥೆಗಳ ವಿರುದ್ದ ಸುಳ್ಳು ಅಥವಾ ಮಾನಹಾನಿಕಾರಿ ತರುವಂತಹ ಆರೋಪಗಳನ್ನು ಪ್ರಕಟಿಸುವುದರ ವಿರುದ್ದ ಮಂಗಳೂರು ರಜಾ ಕಾಲದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದೇ ಆರೋಪ, ಹೇಳಿಕೆ, ಸುದ್ದಿಗಳನ್ನು ಮುದ್ರಣ ಅಥವಾ ದೃಶ್ಯ ಮಾಧ್ಯಮದಲ್ಲಿ ಪ್ರಕಟಿಸಬಾರದೆಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಕ್ಷೇತ್ರದ ವಿರುದ್ದ ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ಮುಂದಾಗಿರುವ ಹೆಗ್ಗಡೆಯವರು ಈಗಾಗಲೇ ಖಾಸಗಿ ಚಾನೆಲ್ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸೌಜನ್ಯ ಕೊಲೆ ಪ್ರಕರಣ ಹೊಸ ಆಯಾಮ ಪಡೆಯುತ್ತಿರುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮಂಗಳವಾರ (ಅ 16) ವಿಶೇಷ ಪತ್ರಿಕಾಗೋಷ್ಠಿಯನ್ನು ಕರೆದು ಘಟನೆಯ ಬಗ್ಗೆ ಮತ್ತೊಮ್ಮೆ ಸವಿವರವಾಗಿ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.
ನಮ್ಮ ಊರಿನ ಹುಡುಗಿ (ಸೌಜನ್ಯ) ಸಾವನ್ನಪ್ಪಿದ ದಿನ ಆಕೆಯ ಪೋಷಕರು ನನ್ನನ್ನು ಭೇಟಿ ಮಾಡಿದ್ದರು. ಅಂದು ರಾತ್ರಿಯೇ ಗೃಹ ಸಚಿವರಾಗಿದ್ದ ಅಶೋಕ್ ಅವರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ವಿವರಿಸಿದ್ದೆ. ಘಟನೆಯ ನೈಜ ಆರೋಪಿಗಳು ಪತ್ತೆಯಾಗಬೇಕು ಅದಕ್ಕಾಗಿ ಸಿಬಿಐ ತನಿಖೆ ನಡೆಯ ಬೇಕೆಂದು ಅಂದೇ ಒತ್ತಾಯಿಸಿದ್ದೆ.
ಸೌಜನ್ಯ ಪ್ರಕರಣ ಮುಂದಿಟ್ಟು ಕೊಂಡು ಧರ್ಮಸ್ಥಳದ ಪಾವಿತ್ರ್ಯತೆಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ. ಸ್ವಾರ್ಥ ಸಾಧನೆಗಾಗಿ ಕ್ಷೇತ್ರಕ್ಕೆ ಕಳಂಕ ತರಲು ಕೆಲವರು ಯತ್ನಿಸಿದ್ದು ಇದು ಧಾರ್ಮಿಕ ಕ್ಷೇತ್ರದ ಮೇಲಿನ ವ್ಯವಸ್ಥಿತ ದಾಳಿ ಎಂದು ಹೆಗ್ಗಡೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಹಲವು ಬಾರಿ ಭಾವೋದ್ವೇಗಕ್ಕೊಳಗಾದ ವೀರೇಂದ್ರ ಹೆಗ್ಗಡೆ, ನನ್ನ ಇದುವರೆಗಿನ ಜೀವನದಲ್ಲಿ ಇಂಥಹಾ ನೋವು ಅನುಭವಿಸಿಲ್ಲ. ನಾನು ಧರ್ಮಾಧಿಕಾರಿಯಾಗಿ ಪಟ್ಟಾಭಿಷೇಕಗೊಂಡು ಸುಮಾರು ನಲವತ್ತು ವರ್ಷವಾಗಿದೆ. ಈ ಘಟನೆ ನನಗೆ ಬಹಳ ನೋವನ್ನು ತಂದಿದೆ ಎಂದು ಹೆಗ್ಗಡೆ ನೊಂದು ನುಡಿದಿದ್ದಾರೆ.
ವೀರೇಂದ್ರ ಹೆಗ್ಗಡೆಯವರ ಪತ್ರಿಕಾ ಗೋಷ್ಠಿಯ ವಿಡಿಯೋ
ಪತ್ರಿಕಾಗೋಷ್ಠಿಯ ಹೈಲೈಟ್ಸ್..

ವೀರೇಂದ್ರ ಹೆಗ್ಗಡೆ ಪತ್ರಿಕಾಗೋಷ್ಠಿಯ ಹೈಲೈಟ್ಸ್
ನಮ್ಮ ವಿರುದ್ದ ಬರುವ ಆರೋಪಗಳಿಂದ ನಮ್ಮ ಆತ್ಮವಿಶ್ವಾಸ, ಸ್ಥೈರ್ಯ ಎಂದೂ ಕುಗ್ಗುವುದಿಲ್ಲ. ಕ್ಷೇತ್ರದ ತೇಜೋವಧೆಗೆ ಪ್ರಯತ್ನಿಸುವವರಿಗೆ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಮತ್ತು ಧರ್ಮದೇವತೆಗಳು ಉತ್ತರ ನೀಡಲಿದ್ದಾರೆ. ಕ್ಷೇತ್ರದಲ್ಲಿ ಶಿಸ್ತಿಗೆ ನಾವು ಒತ್ತು ನೀಡಿದ್ದೇವೆ. ಕ್ಷೇತ್ರದ ಸೇವಾ ಕಾರ್ಯಗಳ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವವರಿಗೆ ಆ ಮಂಜುನಾಥನೇ ಬುದ್ದಿ ಕೊಡಲಿದ್ದಾನೆ.

ವೀರೇಂದ್ರ ಹೆಗ್ಗಡೆ ಪತ್ರಿಕಾಗೋಷ್ಠಿಯ ಹೈಲೈಟ್ಸ್
ಸೌಜನ್ಯ ಕೊಲೆ ಪ್ರಕರಣದ ತನಿಖೆ ಮತ್ತು ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಸಹಜ ಸಾವು, ಆತ್ಮಹತ್ಯೆಗಳಿಗೆ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿಯೇ ಹೊರತು ಶ್ರೀಕ್ಷೇತ್ರವಲ್ಲ. ಸಿಬಿಐ ಅಥವಾ ಸಿಐಡಿ ತನಿಖೆ ನಡೆಸಿ ಎಂದು ಗೃಹ ಇಲಾಖೆಗೆ ನಾವೇ ಒತ್ತಾಯಿಸಿದ್ದೆವು.

ಸೌಜನ್ಯ ಕೊಲೆ ಕೇಸ್, ವೀರೇಂದ್ರ ಹೆಗ್ಗಡೆ ಸ್ಪಷ್ಟೀಕರಣ
ಸೌಜನ್ಯ ಕೊಲೆ ಕೇಸಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೆವು. ಮಹೇಶ್ ಶೆಟ್ಟಿ, ನಾಗರಿಕ ಸೇವಾ ಟ್ರಸ್ಟ್, ಕೇಮಾರು ಶ್ರೀಗಳು ಸೌಜನ್ಯ ಪೋಷಕರನ್ನು ಭೇಟಿಯಾದ ನಂತರ ಪ್ರಕರಣ ಹೊಸ ತಿರುವು ಪಡೆದು ಕೊಂಡಿದೆ. ನಾನಾಗಲಿ ಅಥವ ನನ್ನ ಕುಟುಂಬವಾಗಲಿ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ನಡಿಸಿಲ್ಲ, ಮುಂದೆಯೂ ನಡೆಸುವುದಿಲ್ಲ.

ಸೌಜನ್ಯ ಕೊಲೆ ಕೇಸ್, ವೀರೇಂದ್ರ ಹೆಗ್ಗಡೆ ಸ್ಪಷ್ಟೀಕರಣ
ಉದ್ದೇಶ ಪೂರ್ವಕವಾಗಿ ಪ್ರಕರಣದಲ್ಲಿ ನನ್ನ ಸಹೋದರನ ಮಗ ನಿಶ್ಚಲ್ ಹೆಸರು ಎಳೆಯಲಾಗುತ್ತಿದೆ. ಆತ ನ್ಯೂಯಾರ್ಕಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಕೂಡಾ ಆತ ಅಮೆರಿಕಾದಲ್ಲೇ ಇದ್ದ. ಅಮೆರಿಕಾ ವೀಸಾವನ್ನು ಯಾರಿಂದಾದರೂ ತಿದ್ದಲು ಸಾಧ್ಯವೇ ( ಅಮೆರಿಕಾ ವೀಸಾ ಸಂಬಂಧ ಪಟ್ಟಂತೆ ಪಾಸ್ಪೋರ್ಟ್ ಮತ್ತು ಬ್ಯಾಂಕ್ ವ್ಯವಹಾರದ ಪ್ರತಿಯನ್ನು ಮಾಧ್ಯಮಗಳ ಮುಂದಿಟ್ಟರು)

ವೀರೇಂದ್ರ ಹೆಗ್ಗಡೆ ಪತ್ರಿಕಾಗೋಷ್ಠಿಯ ಹೈಲೈಟ್ಸ್
ಉಜಿರೆಯ ಎಸ್ ಡಿಎಂ ಕಾಲೇಜಿನ ಜಮೀನುಗಳ ಎಲ್ಲಾ ದಾಖಲೆಗಳನ್ನು ಕಂದಾಯ ಇಲಾಖೆಗೆ ನೀಡಲು ಸಿದ್ದರಿದ್ದೇವೆ. ಕ್ಷೇತ್ರದಲ್ಲಿ ಶಿಸ್ತಿಗಾಗಿ ಆಟೋ ಚಾಲಕರು ಸೇರಿ 'ಡಿ' ನಂಬರ್ ಮಾಡಿಕೊಂಡಿದ್ದಾರೆ. ಈ ವ್ಯವಸ್ಥೆಯಿಂದಾಗಿ ವಾಹನ ಚಾಲಕರಲ್ಲಿ ಶಿಸ್ತು ಬಂದಿದ್ದು ಅಪಘಾತಗಳು ಕಮ್ಮಿಯಾಗುತ್ತಿವೆ. ಈ ವ್ಯವಸ್ಥೆ ಸಹಿಸದ ಕೆಲವರು ಅನಗತ್ಯ ಆರೋಪದಲ್ಲಿ ತೊಡಗಿದ್ದಾರೆ.












Click it and Unblock the Notifications