ಮನೆಯಂಗಳದಲ್ಲಿ ಮಾತುಕತೆಗೆ 200ರ ಸಂಭ್ರಮ, ಸಿ.ಎನ್.ಆರ್.ರಾವ್ ಅತಿಥಿ
ಬೆಂಗಳೂರು, ಜೂನ್ 18 : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮನೆಯಂಗಳದಲ್ಲಿ ಮಾತುಕತೆ ತಿಂಗಳ ಕಾರ್ಯಕ್ರಮ 199 ಕಂತುಗಳನ್ನು ಪೂರೈಸಿದೆ. 200ನೇ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 23ರಂದು ನಡೆಯಲಿದೆ.
2001ರಲ್ಲಿ ಆರಂಭವಾದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಭಾರೀ ಪ್ರಸಿದ್ಧಿ ಪಡೆದಿದೆ. 200ನೇ ಕಾರ್ಯಕ್ರಮ ಜೂನ್ 23ರಂದು ನಡೆಯಲಿದ್ದು, ಭಾರತರತ್ನ ಡಾ.ಸಿ.ಎನ್.ಆರ್.ರಾವ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಸಾಹಿತ್ಯ, ಸಂಗೀತ, ರಂಗಭೂಮಿ, ವಿಜ್ಞಾನ, ನೃತ್ಯ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಜನರಿಗೆ ಪರಿಚಯಿಸಿ, ಅವರ ಜೊತೆ ನೇರವಾಗಿ ಸಂವಾದ ನಡೆಸಲು ಅವಕಾಶ ಮಾಡಿಕೊಡುವ ಕಾರ್ಯಕ್ರಮ ಮನೆಯಂಗಳದಲ್ಲಿ ಮಾತುಕತೆ.

ಪ್ರತಿ ತಿಂಗಳ ಕೊನೆಯ ಶನಿವಾರ ಈ ಕಾರ್ಯಕ್ರಮ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯುತ್ತದೆ. ಆದರೆ, ಈ ಬಾರಿ 200ನೇ ಕಾರ್ಯಕ್ರಮವಾಗಿರುವುದರಿಂದ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ. ಆದ್ದರಿಂದ, ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.
2001ರಲ್ಲಿ ಆರಂಭವಾದ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬಂದಿದೆ. ಈಗ 200ರ ಸಂಭ್ರಮದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಮನೆಯಂಗಳದಲ್ಲಿ ಮಾತುಕತೆ ತಿಂಗಳ ಕಾರ್ಯಕ್ರಮದ 100ನೇ ಸಂಚಿಕೆಯಲ್ಲಿ ಡಾ.ಎಂ.ರಾಮಾ ಜೋಯಿಸ್, 150ನೇ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ಪ್ರೊ.ಜಿ.ಕೆ.ಗೋವಿಂದರಾವ್, 199ನೇ ಕಾರ್ಯಕ್ರಮದಲ್ಲಿ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಭಾಗವಹಿಸಿದ್ದರು.











Click it and Unblock the Notifications