Man Animal Conflict; ನೋಡೆಲ್ ಅಧಿಕಾರಿಗಳನ್ನು ನೇಮಿಸಿದ ಸರ್ಕಾರ
ಬೆಂಗಳೂರು, ನವೆಂಬರ್ 24; ಕಾಡಾನೆ ದಾಳಿ, ಬೆಂಗಳೂರು ನಗರಕ್ಕೆ ನುಗ್ಗಿದ ಚಿರತೆ, ರೈತನ ಮೇಲೆ ಹುಲಿ ದಾಳಿ ಹೀಗೆ ಕರ್ನಾಟಕದಲ್ಲಿ ಮಾನವ ವನ್ಯ ಪ್ರಾಣಿಗಳ ಸಂಘರ್ಷ ನಡೆಯುತ್ತಿದೆ. ಕಾಡು ಪ್ರಾಣಿಗಳ ದಾಳಿಗೆ ಸಿಲುಕಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಶಾಶ್ವತ ಪರಿಹಾರ ಒದಗಿಸಿ ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರ ಮಾನವ-ವನ್ಯಪ್ರಾಣಿ ಸಂಘರ್ಷ ಹೆಚ್ಚಾಗಿರುವ ಜಿಲ್ಲೆಗಳಿಗೆ ನೋಡೆಲ್ ಆಫೀಸರ್‌ಗಳನ್ನು ನೇಮಕ ಮಾಡಿ ಆದೇಶಿಸಿದೆ. ಈ ಕುರಿತು ಜಿ. ಮಂಜುಳಾ ಸರ್ಕಾರದ ಅಧೀನ ಕಾರ್ಯದರ್ಶಿ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ, (ಅರಣ್ಯ-ಎ) ಈ ಕುರಿತು ಆದೇಶ ಹೊರಡಿಸಿದ್ದಾರೆ.

ನೋಡೆಲ್ ಅಧಿಕಾರಿಗಳ ನೇಮಕದ ಆದೇಶದಲ್ಲಿ ಕಡತದಲ್ಲಿ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕಳಕಂಡ ಜಿಲ್ಲೆಗಳಿಗೆ ವಿವಿಧ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಹೇಳಿದೆ. ಒಟ್ಟು 9 ಜಿಲ್ಲೆಗಳಿಗೆ ಅಧಿಕಾರಿಗಳನ್ನು ನೇಮಿಸಿ, ಅವರ ಜವಾಬ್ದಾರಿಗಳು ಏನು? ಎಂದು ಸಹ ತಿಳಿಸಲಾಗಿದೆ.
ಯಾವ ಜಿಲ್ಲೆಗೆ ಯಾರು ಅಧಿಕಾರಿ?, ಜವಾಬ್ದಾರಿಗಳು
1. ಕೋಲಾರ- ಗೀತಾಂಜಲಿ
2. ತುಮಕೂರು- ಸ್ಮಿತಾ ಬಿಜ್ಜೂರ್
3. ಬೆಂಗಳೂರು ಗ್ರಾಮಾಂತರ- ವನಶ್ರೀ ವಿಪಿನ್ ಸಿಂಗ್
4. ರಾಮನಗರ- ಅನಿಲ್ ಕುಮಾರ್ ರತನ್
5. ಹಾಸನ- ಕುಮಾರ್ ಪುಷ್ಕರ್
6. ಚಿಕ್ಕಮಗಳೂರು- ವಿಜಯ್ ಮೋಹನ್ ರಾಜ್
7.ಮೈಸೂರು- ಸಾಸ್ವತಿ ಮಿಶ್ರಾ
8. ಚಾಮರಾಜನಗರ- ಬಿಶ್ವಜಿತ್ ಮಿಶ್ರಾ
9. ಕೊಡಗು- ಬ್ರಿಜೇಶ್ ಕುಮಾರ್
ನೋಡಲ್ ಅಧಿಕಾರಿಗಳು ಅವರಿಗೆ ವಹಿಸಲಾದ ಜಿಲ್ಲೆಗೆ ವಾರದಲ್ಲಿ 3 ದಿನ ಕ್ಷೇತ್ರ ಭೇಟಿ ನೀಡುವುದು.
ಕ್ಷೇತ್ರ ಭೇಟಿ ಸಮಯದಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ ಕುರಿತಂತೆ ಪರಿಶೀಲನಾ ಸಭೆ ನಡೆಸುವುದು. ಜಿಲ್ಲೆಯಲ್ಲಿ ಬಾಕಿ ಇರುವ ವಿವಿಧ ಪರಿಹಾರಾತ್ಮಕ ಧನ ಪಾವತಿಸುವ ಪ್ರಕರಣಗಳ ಕುರಿತು ವಿಶೇಷವಾಗಿ ಪರಿಶೀಲಿಸುವುದು.
ಜಿಲ್ಲೆಯಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗಟ್ಟುವ/ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಯೋಜನೆ ತಯಾರಿಸಿ ಸಲ್ಲಿಸುವುದು.
ನೋಡಲ್ ಅಧಿಕಾರಿಗಳು ಕ್ಷೇತ್ರ ಭೇಟಿಯ ವರದಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡೆ ಮುಖ್ಯಸ್ಥರು) ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಇವರಿಗೆ ಸಲ್ಲಿಸುವುದು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲೆಗಳ ವರದಿಗಳನ್ನು ಅವಲೋಕಿಸಿ ರಾಜ್ಯಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವುದು ಎಂದು ಸೂಚಿಸಲಾಗಿದೆ.
ಚಿರತೆ ಕಾರ್ಯಪಡೆ ರಚನೆ; ಜಿ. ಮಂಜುಳಾ ಅವರು ಮತ್ತೊಂದು ಆದೇಶದಲ್ಲಿ ಬೆಂಗಳೂರು ಜಿಲ್ಲೆಗೆ ಚಿರತೆ ಕಾರ್ಯಪಡೆ (Leopard Task Forcel) ರಚನೆ ಕುರಿತು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಭಾಗಗಳಲ್ಲಿ ಚಿರತೆ ಹಾವಳಿಯನ್ನು ತಡೆಗಟ್ಟಲು ಚಿರತೆ ಕಾರ್ಯಪಡೆ ರಚಿಸುವ ಕುರಿತು ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.
ಬೆಂಗಳೂರು ಜಿಲ್ಲೆಯ ಕಗ್ಗಲಿಪುರ/ ಆನೆಕಲ್ಲು/ ಯಲಹಂಕ/ ಹೊಸಕೋಟೆ/ ಕೆ. ಆರ್. ಪುರ ವಲಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾವಳಿ ತಡೆಗಟ್ಟಲು ಬೆಂಗಳೂರು ಜಿಲ್ಲೆಗೆ ಒಂದು ಚಿರತೆ ಕಾರ್ಯಪಡೆಯನ್ನು ರಚಿಸಲು ಅನುಮೋದಿಸಿದೆ.
ಬೆಂಗಳೂರು ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪ್ರಸ್ತುತ ಲಭ್ಯವಿರುವ ಸಲಕರಣೆಗಳನ್ನು ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯಪಡೆಯನ್ನು ಕಾರ್ಯಗತಗೊಳಿಸಲು ಸೂಚಿಸಲಾಗಿದೆ.
ಸರ್ಕಾರದ ಆದೇಶದಲ್ಲಿ ನೀಡಲಾಗಿರುವ ಕರ್ತವ್ಯಗಳು ಮತ್ತು ನಿರ್ದೇಶನಗಳನ್ವಯ ಚಿರತೆ ಕಾರ್ಯಪಡೆ ಕಾರ್ಯನಿರ್ವಹಿಸತಕ್ಕದ್ದು ಮತ್ತು ಈ ಕುರಿತು ತಮ್ಮ ಹಂತದಲ್ಲಿ ಒಂದು ಸೂಕ್ತ ಆದೇಶ ಹೊರಡಿಸುವಂತೆ ಸೂಚಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಇವರಿಗೆ ಸೂಚನೆ ನೀಡಲಾಗಿದೆ.












Click it and Unblock the Notifications