ಅಮ್ಮನ ಅರಸುತ್ತಾ ಸಾಂಬಾರು ಪಾತ್ರೆಗೆ ಬಿದ್ದಿದ್ದ ಮಗು ಸಾವು

ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಒಂದೇ ತಿಂಗಳಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದು, ಇದುವರೆಗೆ ಈ ರೀತಿಯ ಘಟನೆಯಿಂದ ರಾಜ್ಯದಲ್ಲಿ ಐವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಅಂಗನವಾಡಿ ಸಹಾಯಕಿ ಮಂಜುಳಾ ಅವರ ಪುತ್ರ ಮನೋಜ್ ಗೌಡ (3) ಕಳೆದ ಸೆ. 29ರಂದು ಸಾಂಬಾರ್ ಪಾತ್ರೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಮಂಜುಳಾ ಮತ್ತು ಅಂಬರೀಶ್ ದಂಪತಿಗೆ ಮನೋಜ್ ಗೌಡ ಏಕೈಕ ಗಂಡು ಮಗು. ಎರಡು ಹೆಣ್ಣು ಮಕ್ಕಳ ನಂತರ ಜನಿಸಿದ್ದ ಮನೋಜ್‌ಗೌಡನನ್ನು ತಾಯಿ ಕೆಲಸಕ್ಕೆ ಹೋಗುವಾಗ ಶಾಲೆಗೆ ಕರೆದೊಯ್ಯುತ್ತಿದ್ದು, ಅಲ್ಲಿಯೇ ಆಟವಾಡಿಕೊಂಡಿರುತ್ತಿದ್ದ.
ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ 10 ಲೀಟರ್ ಸಾಮರ್ಥ್ಯದ ಕುಕ್ಕರ್ ನಲ್ಲಿ ಸಾಂಬಾರ್ ತಯಾರು ಮಾಡಿ ನೆಲದ ಮೇಲಿಟ್ಟು, ಅನ್ನದ ಪಾತ್ರೆಯನ್ನು ಗ್ಯಾಸ್ ಮೇಲಿಡಲು ಮುಂದಾಗಿದ್ದರು. ಅಮ್ಮನ ಬಳಿಯೇ ಆಟವಾಡುತ್ತಿದ್ದ ಮನೋಜ್ ಹಿಂದೆ ಹಿಂದೆ ಹೋಗುತ್ತಿದ್ದಂತೆ ಸಾಂಬಾರ್ ಕುಕ್ಕರ್ ಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.
'ಮಗುವಿನ ದೇಹ ಶೇ.45ರಷ್ಟು ಬೆಂದು ಹೋಗಿತ್ತು. ಮಗುವನ್ನು ಬದುಕಿಸಲು ಅಗತ್ಯ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ' ಎಂದು ಆಸ್ಪತ್ರೆ ವೈದ್ಯ ಡಾ. ರಮೇಶ್ ತಿಳಿಸಿದ್ದಾರೆ.
ಯಾರನ್ನೂ ಹೊಣೆ ಮಾಡುವುದಿಲ್ಲ:
'ಈ ಘಟನೆಗೆ ಯಾರನ್ನೂ ಹೊಣೆ ಮಾಡುವುದಿಲ್ಲ. ಊಟದ ಕೋಣೆಯಲ್ಲಿ ಮಕ್ಕಳನ್ನು ಬಿಡಬಾರದು ಎಂದು ಸರಕಾರದ ಆದೇಶವಿದ್ದರೂ, ಈ ಘಟನೆ ನಡೆದಿದೆ. ಅಡುಗೆ ವೇಳೆ ಮಗುವನ್ನು ಕೋಣೆಯಿಂದ ಹೊರಗೆ ಕೂರಿಸಿತ್ತಾದರೂ ಹಸಿವಿನಿಂದಾಗಿ ತಾಯಿಯನ್ನು ಹುಡುಕಿಕೊಂಡು ಒಳಗೆ ಹೋಯಿತು' ಎಂದು ಮೃತ ಮಗುವಿನ ಸೋದರಮಾವ ಶಿವಕುಮಾರ್ ಹೇಳಿದ್ದಾರೆ.
ಬಿಸಿಯೂಟ ವಿತರಣೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಪರಿಷ್ಕರಣೆ ಮಾಡಿತ್ತು. ಕರ್ತವ್ಯಲೋಪವಾಗಿದ್ದಲ್ಲಿ ಶಿಕ್ಷಕರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿತ್ತು. ಊಟ ಬಡಿಸುವ ವೇಳೆ ಶಿಕ್ಷಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿತ್ತು. ಇಷ್ಟೆಲ್ಲ ಆದೇಶದ ಹೊರತಾಗಿಯೂ ಒಂದೇ ತಿಂಗಳಲ್ಲಿ ಇಂಥ ಮೂರು ಘಟನೆ ನಡೆದಿರುವುದು ವಿಪರ್ಯಾಸ.












Click it and Unblock the Notifications