Breaking; ಬೆಂಗಳೂರಿಗೆ ಬಂದ ಖರ್ಗೆ, ಸೇಬಿನ ಹಾರದ ಸ್ವಾಗತ
ಬೆಂಗಳೂರು, ನವೆಂಬರ್ 6; ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಕರ್ನಾಟಕದ ಕಾಂಗ್ರೆಸ್ ನಾಯಕರು ಅದ್ದೂರಿಯಾಗಿ ಬರಮಾಡಿಕೊಂಡರು. ಪಕ್ಷದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಖರ್ಗೆ ಆಗಮಿಸಿದ್ದಾರೆ.
ಭಾನುವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದರು. ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿದ ಖರ್ಗೆಯನ್ನು ರಾಜ್ಯದ ನಾಯಕರು ಸೇಬಿನ ಹಾರ ಹಾಕಿ ಸ್ವಾಗತಿಸಿದರು.
ದೇವನಹಳ್ಳಿ ಟೋಲ್ ಗೇಟ್ ಬಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಕೃಷ್ಣ ಬೈರೇಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಕಾಂಗ್ರೆಸ್ ಖರ್ಗೆ ಆಗಮನದ ಕುರಿತು ಟ್ವೀಟ್ ಮಾಡಿದ್ದು, 'ದೇಶದ ಪರಂಪರೆಯೊಂದಿಗೆ ಬೆಸೆದಿರುವ ಐತಿಹಾಸಿಕ ಪಕ್ಷವಾದ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನವನ್ನು ಕನ್ನಡಿಗರೊಬ್ಬರು ಅಲಂಕರಿಸಿರುವುದು ಸಮಸ್ತ ಕನ್ನಡಿಗರಿಗೆ ಸಂಭ್ರಮದ ಸಂಗತಿ' ಎಂದು ಹೇಳಿದೆ.
ಮಲ್ಲಿಕಾರ್ಜುನ ಖರ್ಗೆ ಹಳೆಯ ಚಿತ್ರವೊಂದನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, '9 ಬಾರಿ ಶಾಸಕರಾಗಿ, 3 ಬಾರಿ ಸಂಸದರಾಗಿ, 5 ಬಾರಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ ಖರ್ಗೆ ಅವರಿಗೆ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆ ಸಂದಿದೆ' ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್‌ನಲ್ಲಿ ತಿಳಿಸಿದೆ.
'ನಿಷ್ಠೆ, ಸೇವೆ, ಪ್ರಾಮಾಣಿಕವಾದ ಜನಪರ ಕಾಳಜಿಗಳೇ ಮಲ್ಲಿಕಾರ್ಜುನ ಖರ್ಗೆಯವರ ಸುದೀರ್ಘ ರಾಜಕೀಯ ಬದುಕಿನ ಶಕ್ತಿಯಾಗಿವೆ. ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ ಮಲ್ಲಿಕಾರ್ಜುನ ಖರ್ಗೆಯವರು ಸಾಮಾಜಿಕ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ತಮ್ಮ ಸಾಧನೆಗಳನ್ನು ಎಂದೂ ಸಹ ತಮ್ಮದೇ ಎಂದು ಹೇಳಿಕೊಳ್ಳದೆ ಕರ್ತವ್ಯವೆಂದು ಭಾವಿಸಿ ಮುನ್ನೆಡೆಯುವ ಗುಣ ಅವರದ್ದು' ಎಂದು ಕಾಂಗ್ರೆಸ್ ಬಣ್ಣಿಸಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ. ಕನ್ನಡಿಗರೊಬ್ಬರು ಎರಡನೇ ಬಾರಿಗೆ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.












Click it and Unblock the Notifications