'ರೇಸ್‌ನಲ್ಲಿರುವ ಯಾವ ನಾಯಕರೂ ಸಿಎಂ ಆಗಲ್ಲ; ಮಲ್ಲಿಕಾರ್ಜುನ್ ಖರ್ಗೆ ಸಿಎಂ ಆಗ್ತಾರೆ'
ಬೆಂಗಳೂರು, ನವೆಂಬರ್ 01: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಪಟ್ಟಕ್ಕಾಗಿ ಭರ್ಜರಿ ಪೈಪೋಟಿ ಶುರುವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದ್ದು, ಮುಖ್ಯಮಂತ್ರಿ ಪಟ್ಟಕ್ಕಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪಟ್ಟು ಹಿಡಿದಿದ್ದಾರೆ. ಇತ್ತ ದಲಿತ ಸಿಎಂ ಕೂಗು ಸಹ ಕೇಳಿ ಬಂದಿದ್ದು, ಈ ನಡುವೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿಮುಖ್ಯಮಂತ್ರಿ ಹುದ್ದೆಗಾಗಿ ಜಟಾಪಟಿ ಆರಂಭವಾಗಿದ್ದು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಇದ್ದರೂ, ಯಾರೂ ಸಿಎಂ ಆಗುವುದಿಲ್ಲ ಎಂದಿದ್ದಾರೆ. ಡಾರ್ಕ್ ಹಾರ್ಸ್ ಒಬ್ಬರು ಮುಖ್ಯಮಂತ್ರಿಯಾಗಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯದ ಸಾರಥ್ಯ ವಹಿಸಲಿದ್ದಾರೆ. ನಾಯಕತ್ವ ಬದಲಾವಣೆ ಖಚಿತ ಎಂದಿದ್ದಾರೆ. ಸಿಎಂ ಪುತ್ರ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿ ಹೋಗಿದ್ದಾರೆ. ಆದರೆ, ಡಿಕೆಶಿಯೂ ಸಿಎಂ ಆಗಲ್ಲ, ಸತೀಶ್ ಜಾರಕಿಹೊಳಿ ಕೂಡ ಸಿಎಂ ಆಗಲ್ಲ. ನಾಯಕತ್ವ ಬದಲಾವಣೆ ಆಗಲಿದೆ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದು, ಅವರೇ ಸಿಎಂ ಆಗಲಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

ಇನ್ನೂ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುತ್ತಾರೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಯಾರು ಸಿಎಂ ಆಗಬೇಕು ಅಂತ ನಿರ್ಧಾರ ಮಾಡುತ್ತಾರೆಯೇ? ಎಂದರು. ನವೆಂಬರ್ ಕ್ರಾಂತಿ ಏನೂ ನಡೆಯಲ್ಲ. ಉತ್ತರಾಧಿಕಾರಿ ವಿಚಾರದಲ್ಲಿ ಯತೀಂದ್ರ ಅವರ ಹೇಳಿಕೆ ಅದು ಅವರು ವೈಯಕ್ತಿಕ ವಿಚಾರ. ಸಿಎಂ ಮುಂದಿನ ಚುನಾವಣೆ ನಿಲ್ಲುವ ವಿಚಾರ ಅದು ಅವರು ವೈಯಕ್ತಿಕ ವಿಚಾರ. ಎಲ್ಲಾ ಸಮಾಜದವರು ಸಿಎಂ ಆಗಬೇಕು ಎಂದು ಬಯಸುತ್ತಾರೆ. ದಲಿತ ಸಿಎಂ ವಿಚಾರ ಕೂಡಾ ಹಾಗೆ. ಅದನ್ನು ಎಲ್ಲಿ ಚರ್ಚೆ ನಡೆಸಬೇಕೋ ಅಲ್ಲೇ ನಡೆಸಬೇಕು ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಡಿಸಿಎಂ ಆಗುವುದಕ್ಕೆ ಆರ್ ಎಸ್ ಎಸ್ ನ್ನು ಟೀಕಿಸುತ್ತಿದ್ದಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಆರ್ ಎಸ್ ಎಸ್ ನ್ನು ಟೀಕಿಸಿದರೆ ಡಿಸಿಎಂ ಆಗುವುದಾದರೆ ಡಿಸಿಎಂ ಯಾಕೆ ಸಿಎಂ ಮಾಡಲಿ ಬಿಡಿ ಎಂದರು. ಕಲಬುರಗಿಯಲ್ಲಿ ತಳವಾರ ಸಮಾಜದ ಪ್ರತಿಭಟನೆ ವಿಚಾರ, ಬೆಂಗಳೂರಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಧ್ಯದಲ್ಲೇ ಕೋಲಿ ಕಬ್ಬಲಿಗ ಹಾಗೂ ತಳವಾರ ಸಮುದಾಯವನ್ನು ಎಸ್ ಟಿ ಸೇರಿಸುವ ವಿಚಾರ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದರು.
ಕಲಬುರಗಿ ಜಿಲ್ಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರು ಇಲ್ಲ ಅಂತ ಅಲ್ಲ. ಆದರೆ ಆಯ್ಕೆ ಸಮಿತಿ ಮಾನದಂಡಗಳನ್ನು ಅನುಕರಿಸಿ ಆಯ್ಕೆ ಮಾಡಲಾಗಿದೆ ಎಂದರು. ಬೀದಿನಾಯಿಗಳ ಹಾವಳಿ ತಪ್ಪಿಸಲು ಕ್ರಮವಹಿಸಲಾಗುತ್ತಿದೆ. ಇದಕ್ಕಾಗಿ ರೂ 5 ಕೋಟಿ ಅನುದಾನ ನೀಡಲಾಗುತ್ತಿದೆ. ನಾಯಿಗಳ ಸೆಡ್ ನಿರ್ಮಾಣ ಮಾಡಿ ಅವುಗಳನ್ನು ಸುಸ್ಥಿತವಾಗಿ ಇರಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.












Click it and Unblock the Notifications