ಸಚಿವ ಸ್ಥಾನಕ್ಕಾಗಿ ಸೋನಿಯಾಗೆ ಗುತ್ತೇದಾರ್ ಪತ್ರ!
ಬೆಂಗಳೂರು, ಜ.20 : ಲೋಕಸಭೆ ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಸಂಪುಟ ಸೇರಲು ಪಕ್ಷದ ಶಾಸಕರು ತೆರೆಮರೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸದ್ಯ ಅಫಜಲ್ಪುರ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಸಚಿವ ಸ್ಥಾನ ನೀಡುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಸರಿಯಾಗಿ ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕೈಬಿಡಿ ಮತ್ತು ಪಕ್ಷದ ನಿಷ್ಠಾವಂತರು ಹಾಗೂ ಹಿರಿಯ ನಾಯಕರಿಗೆ ಅವಕಾಶ ಮಾಡಿಕೊಡಿ ಎಂದು ಮಾಲೀಕಯ್ಯ ಗುತ್ತೇದಾರ್ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಆರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ. ಸಚಿವ ಸ್ಥಾನ ನೀಡಿ ಎಂದು ಗುತ್ತೇದಾರ್ ಪತ್ರದಲ್ಲಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಅನುಕೂಲವಾಗುವಂತೆ, ಪಕ್ಷದ ಹಿರಿಯ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸಿದ ಕಾರ್ಯಕರ್ತರಿಗೆ ನಿಗಮ- ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ. ಚುನಾವಣೆ ವೇಳೆಗೆ ಪಕ್ಷದಲ್ಲಿ ಹೊಸ ಚೈತನ್ಯ ಬರುವಂತೆ ಬದಲಾವಣೆ ಮಾಡಿ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.[ಕೃಷ್ಣ ಮನೆ ತಲುಪಿದ ಕಾಂಗ್ರೆಸ್ ಬಂಡಾಯ]
ರಾಜ್ಯದಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಿತ್ಯ ಟೀಕೆಗಳು ಕೇಳಿಬರುತ್ತಿದೆ. ಆದರೆ, ಸಚಿವ ಸಂಪುಟದ ಸಹೋದ್ಯೋಗಿಗಳು ಅವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಪತ್ರದಲ್ಲಿ ಗುತ್ತೇದಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಸಚಿವರ ಮೌನದಿಂದಾಗಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಚುನಾವಣೆ ಎದುರಾಗುತ್ತಿರುವ ಇಂತಹ ಬೆಳವಣಿಗೆ ಉತ್ತಮವಲ್ಲ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.[ಸಂಪುಟ ವಿಸ್ತರಣೆ ಅಸಮಾಧಾನ ಸ್ಫೋಟ]
ಡಿಕೆ ಶಿವಕುಮಾರ್ ಮತ್ತು ರೋಷನ್ ಬೇಗ್ ಸಚಿವ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಹಲವಾರು ಅತೃಪ್ತ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದರು. ಆದರೆ, ಸಿದ್ದರಾಮಯ್ಯ ಇಬ್ಬರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಂಡು ಮೂರು ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯರು ಸಚಿವ ಸಂಪುಟ ಸೇರುವ ಉತ್ಸಾಹದಲ್ಲಿದ್ದಾರೆ.












Click it and Unblock the Notifications