ಅಥಣಿ ಟಿಕೆಟ್ ರಹಸ್ಯ ಬಯಲು; ಚುನಾವಣೆಗೂ ಮೊದಲೇ ಮಹೇಶ್ ಕುಮಟಳ್ಳಿಯ ರಾಜಕೀಯ ಭವಿಷ್ಯ ನುಡಿದ ಲಕ್ಷ್ಮಣ ಸವದಿ
ಬೆಳಗಾವಿ, ಏಪ್ರಿಲ್ 7: ರಾಜಕೀಯ ಜಿದ್ದಾಜಿದ್ದಿನಿಂದ ಕೂಡಿದ ಅಥಣಿ ವಿಧಾನಸಭೆ ಕ್ಷೇತ್ರ ಸದ್ಯ ರಾಜ್ಯದ ಗಮನ ಸೆಳೆಯಲಿದೆ. ಅಥಣಿ ಟಿಕೆಟ್ ವಿಚಾರವಾಗಿ ಹಾಲಿ ಬಿಜೆಪಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ವಿಧಾನ ಪರಿಷತ್ ಸದಸ್ಯ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ನಡುವೆ ಬಿಜೆಪಿ ಟೆಕೆಟ್‌ಗಾಗಿ ಇಲ್ಲಿ ಭಾರೀ ಸ್ಪರ್ಧೆ ಏರ್ಪಟ್ಟಿದೆ.
ಇನ್ನೂ ತನ್ನ ಸ್ನೇಹಿತನಿಗೆ ಟಿಕೆಟ್ ಕೊಡಿಸಲು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದು, ಒಂದು ವೇಳೆ ಅಥಣಿ ಕ್ಷೇತ್ರದಲ್ಲಿ ಕುಮಠಳ್ಳಿ ಅವರಿಗೆ ಟಿಕೆಟ್ ಕೊಡದಿದ್ದರೆ ನಾನು ಗೋಕಾಕದಿಂದ ಸ್ಪರ್ಧಿಸುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದು ಸಂಚಲನ ಮೂಡಿಸಿದೆ. ಇದರೊಂದಿಗೆ ಅಥಣಿಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ.

ಇತ್ತ ಈ ಬಾರಿ ಅಥಣಿ ಕ್ಷೇತ್ರದಿಂದ ತಮಗೆ ಟಿಕೆಟ್ ಕೊಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಹೈಕಮಾಂಡ್ ನಾಯಕರ ಜೊತೆಗೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಲಕ್ಷ್ಮಣ್ ಸವದಿ ಮಾತನಾಡಿ, ಅಥಣಿ ಟಿಕೆಟ್ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ಇನ್ನೂ ಟಿಕೆಟ್ ಗಾಗಿ ಪಟ್ಟು ಹಿಡಿದಿರುವ ಸವದಿ ಚುನಾವಣೆಗೂ ಮೊದಲೇ ಮಹೇಶ್ ಕುಮಟಳ್ಳಿ ಅವರ ಮುಂದಿನ ರಾಜಕೀಯ ಭವಿಷ್ಯವನ್ನ ನುಡಿದಿದ್ದಾರೆ.
ಅಥಣಿಯಲ್ಲಿ ಈ ಬಾರಿ ಮಹೇಶ ಕುಮಟಳ್ಳಿ ಸೋಲುವ ಲಕ್ಷಣಗಳು ಕಾಣುತ್ತಿದ್ದು, ಅವರ ಸೋಲಿನ ಅದರ ಹೊಣೆಯನ್ನು ನನ್ನ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನೂ ಅದಕ್ಕಾಗಿ ಅವರ ಬದಲಿಗೆ ನನ್ನ ವಿಧಾನ ಪರಿಷತ್ ಸದಸ್ಯತ್ವವನ್ನು ಮಹೇಶ ಕುಮಟಳ್ಳಿಗೆ ಕೊಟ್ಟು, ನನ್ನನ್ನು ಈ ಬಾರಿ ಅಥಣಿ ಅಭ್ಯರ್ಥಿಯನ್ನಾಗಿ ಮಾಡಲಿ ಎಂದು ಹಿರಿಯ ನಾಯಕರಿಗೆ ಹೇಳಿದ್ದೇನೆ ಎಂದು ಲಕ್ಷ್ಮಣ್ ಸವದಿ ಹೇಳಿದರು.

ಮಹೇಶ ಕುಮಠಳ್ಳಿಯ ಮೇಲೆ ನನಗೆ ಯಾವುದೇ ದ್ವೇಷವಿಲ್ಲ, ಆದರೆ ಈ ಬಾರಿ ಅಥಣಿಯಲ್ಲಿ ವಾತಾವರಣ ಬೇರೆ ಇದೆ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಸ್ವಲ್ಪ ಕಷ್ಟ ಇದೆ, ಒಂದೊಮ್ಮೆ ಮಹೇಶ್ ಸ್ಪರ್ಧಿಸಿದರೆ ಗೆಲ್ಲಿಸಲು ಎಲ್ಲರೂ ಸೇರಿ ಶ್ರಮಿಸೋಣ. ಆದಾಗ್ಯೂ ಒಮ್ಮೆ ಅವರು ಸೋತಲ್ಲಿ ಸೋಲಿನ ಹಣೆ ಪಟ್ಟಿಯನ್ನು ಪೂರ್ತಿ ನನ್ನ ತಲೆಗೆ ಕಟ್ಟುವ ಕೆಲವೊಂದು ಶಕ್ತಿಗಳು ಜಿಲ್ಲೆಯಲ್ಲಿವೆ. ಸೋಲಿಗೆ ಲಕ್ಷ್ಮಣ ಸವದಿಯೇ ನೇರ ಕಾರಣ ಎಂದು ಪ್ರಚಾರ ಮಾಡುತ್ತಾರೆ. ಆವಾಗ ಪಕ್ಷದವರು ನನ್ನ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೆಲ್ಲಕ್ಕೂ ಇರುವ ಒಂದು ಮಾರ್ಗ ಏನೆಂದರೆ, ನನ್ನ ವಿಧಾನ ಪರಿಷತ್ ಅವಧಿ ಇನ್ನು 5 ವರ್ಷವಿದೆ. ಇದನ್ನು ಮಹೇಶ ಕುಮಠಳ್ಳಿಗೆ ಕೊಡಲಿ, ನನಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲಿ. ನನ್ನನ್ನು ಜನರು ಹೆಚ್ಚಿನ ಮತದಿಂದ ಆರಿಸಿ ತರುತ್ತಾರೆ ಎನ್ನುವ ವಿಶ್ವಾಸವಿದೆ, ಈಗಾಗಲೆ ನನಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಿದ್ದೇನೆ. ಆದರೆ ಇದು ಇಲ್ಲಿ ಬಗೆಹರಿಯುವುದಿಲ್ಲ ಈ ಬಗ್ಗೆ ದೆಹಲಿ ಮಟ್ಟದಲ್ಲಿ ನಿರ್ಣಯವಾಗಬೇಕು ಕಾದು ನೋಡೋಣ ಎಂದು ಹೇಳಿದರು.












Click it and Unblock the Notifications