LPG Strike: ದೀಪಾವಳಿಗೆ ಎಲ್‌ಪಿಜಿ ಶಾಕ್, ಸಿಲಿಂಡರ್ ಪೂರೈಕೆದಾರರಿಂದ ಬಂದ್‌ಗೆ ಕರೆ
ದಿನನಿತ್ಯದ ಅಡುಗೆಗಾಗಿ ಎಲ್‌ಪಿಜಿ ಸಿಲಿಂಡರ್ ಅನ್ನೇ ಅವಲಂಬಿಸಿದ್ದವರಿಗೆ ಪೂರೈಕೆದಾರರು ಶಾಕ್ ನೀಡಿದ್ದಾರೆ. ದಕ್ಷಿಣ ಪ್ರದೇಶ ಬೃಹತ್ ಎಲ್‌ಪಿಜಿ ಸಾಗಣೆದಾರರ ಮಾಲೀಕರ ಸಂಘದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಲ್‌ಪಿಜಿ ಸಿಲಿಂಡರ್ ಸಾಗಣೆದಾರರು ಬಂದ್‌ಗೆ ಕರೆ ನೀಡಿದ್ದಾರೆ. ಹೀಗಾಗಿ ದೀಪಾವಳಿ ಹೊತ್ತಲ್ಲೇ ಎಲ್‌ಪಿಜಿ ಸಿಲಿಂಡರ್ ವಿತರಣೆಯ ಆತಂಕ ಎದುರಾಗಿದೆ. ಸಾಗಣೆದಾರರು ತಮ್ಮ ಕೆಲಸ ನಿಲ್ಲಿಸಿ, ಮುಷ್ಕರ ನಡೆಸುತ್ತಿದ್ದಾರೆ. ಇದರ ನಡುವೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಸಿಲಿಂಡರ್‌ಗಳ ಸರಬರಾಜಿನ ಅಡಚಣೆಯ ಬಗ್ಗೆ ಮಹತ್ವದ ಮಾಹಿತಿ ನೀಡಿವೆ.
ದಕ್ಷಿಣ ಪ್ರದೇಶ ಬೃಹತ್ ಎಲ್‌ಪಿಜಿ ಸಾಗಣೆದಾರರ ಮಾಲೀಕರ ಸಂಘವು ಸೋಮವಾರವೂ ಸತತವಾಗಿ ನಾಲ್ಕನೇ ದಿನವೂ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಹೀಗಾಗಿ ಗ್ರಾಹಕರಿಗೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ. ಸಾಗಣೆದಾರರ ಈ ಮುಷ್ಕರ ಕಾನೂನುಬಾಹಿರ ಎಂದು ತೈಲ ಉದ್ಯಮದ ಹಿರಿಯ ಅಧಿಕಾರಿಗಳು ಖಂಡಿಸಿದ್ದಾರೆ.

ಬಂದ್‌ಗೆ ಕಾರಣವೇನು?
ಸಾಗಣೆದಾರರು ಕಳೆದ ಮಾರ್ಚ್-ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದಾಗ, ನಾವು ಅವರೊಂದಿಗೆ ಚರ್ಚೆ ನಡೆಸಿ ಅವರ ಷರತ್ತುಗಳಿಗೆ ಒಪ್ಪಿಕೊಂಡೆವು. ಅದರ ನಂತರವೇ ಇತ್ತೀಚಿನ ಟೆಂಡರ್ ಕರೆದೆವು. ಆದರೆ ಈಗ ಅವರು ಹಳೆಯ ಟೆಂಡರ್ ಅನ್ನು ಮುಂದುವರಿಸಬೇಕೆಂದು ಬಯಸುತ್ತಿದ್ದಾರೆ. ಅದು ನಿಜಕ್ಕೂ ಅನಗತ್ಯ. ಈ ಟೆಂಡರ್ ಒಂದು ರಾಜ್ಯಕ್ಕೆ ಸೀಮಿತವಾಗಿದ್ದಲ್ಲ, ಇಡೀ ದೇಶಕ್ಕೆ ಅನ್ವಯಿಸುತ್ತದೆ. ಹೀಗಾಗಿ ಇದು ದೊಡ್ಡ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ನಮ್ಮ ಸಂಘದ ಸದಸ್ಯರು ಮುಷ್ಕರ ನಡೆಸಿಲ್ಲ, ಬದಲಿಗೆ ಅವರ ಒಪ್ಪಂದದ ಅವಧಿ ಮುಗಿದಿದ್ದರಿಂದ ಕೆಲಸ ನಿಲ್ಲಿಸಿದ್ದಾರೆ ಎಂದು ದಕ್ಷಿಣ ಪ್ರದೇಶ ಬೃಹತ್ ಎಲ್‌ಪಿಜಿ ಸಾಗಣೆದಾರರ ಮಾಲೀಕರ ಸಂಘದ ಅಧ್ಯಕ್ಷ ಕೆ.ಸುಂದರರಾಜ್ ಹೇಳಿದ್ದಾರೆ. ಸಣ್ಣ ಏಕ ಟ್ರಕ್ ಮಾಲೀಕರು ನಿರ್ದಿಷ್ಟ ಟೆಂಡರ್ ಸ್ಥಿತಿಯಿಂದ ಪ್ರಭಾವಿತರಾಗುತ್ತಿದ್ದಾರೆ, ನಾವು ಅದನ್ನು ಮೂಕ ಪ್ರೇಕ್ಷಕರಂತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಬಾಕಿ ಉಳಿದಿರುವ ಸ್ಟಾಕ್ ಮೂರರಿಂದ ನಾಲ್ಕು ದಿನಗಳು ಮಾತ್ರ ಸಿಗಲಿದ್ದು, ಅಗತ್ಯವಿರುವ ಅರ್ಧದಷ್ಟು ಲೋಡ್‌ಗಳು ಮಾತ್ರ ಸಿಗುತ್ತಿವೆ. ನಮಗೆ ಸಿಗುತ್ತಿರುವ ಸ್ಟಾಕ್‌ನೊಂದಿಗೆ ನಾವು ಸರಬರಾಜುಗಳನ್ನು ನಿರ್ವಹಿಸುತ್ತಿದ್ದೇವೆ. ಸದ್ಯಕ್ಕೆ ಗ್ರಾಹಕರು ಬುಕಿಂಗ್ ಮಾಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಸ್ಟಾಕ್ ಇದೆ, ಆತಂಕ ಬೇಡ
ಆದರೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ಅಡಚಣೆಗಳಿಲ್ಲ ಎಂದು ಹೇಳಿವೆ. ಸಾಗಣೆದಾರರ ಪೈಕಿ ಸುಮಾರು ಶೇ 25ರಷ್ಟು ಬೃಹತ್ ಟ್ರಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಭಾನುವಾರವೂ ಎಲ್‌ಪಿಜಿ ವಿತರಣೆ ನಡೆದಿದೆ. ರಾಜ್ಯ ಸರ್ಕಾರಗಳಿಗೂ ಈ ಮುಷ್ಕರದ ಬಗ್ಗೆ ತಿಳಿದಿದೆ. ಸದ್ಯಕ್ಕೆ ಮೂರು ತೈಲ ಕಂಪನಿಗಳು ಸಾಕಷ್ಟು ಸ್ಟಾಕ್ ಹೊಂದಿವೆ. ಹೀಗಾಗಿ ಗ್ರಾಹಕರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications