LPG: ಎಲ್‌ಪಿಜಿ ಸಬ್ಸಿಡಿ ಸ್ಥಗಿತದ ಭೀತಿ, ರಾಜ್ಯದಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ನೆರೆದ ಗ್ರಾಹಕರ ದಂಡು
LPG Gas Subsidy: ಭಾರತದ ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಗ್ರಾಹಕರಿಗೆ ಇ-ಕೆವೈಸಿಯನ್ನು ಆಗಸ್ಟ್ 16ರ ವರೆಗೂ ಅವಕಾಶ ನೀಡಿವೆ. ಇದೀಗ ಈ ಗಡುವು ಮುಗಿಯುತ್ತಾ ಬಂದಿದ್ದು, ರಾಜ್ಯದ ಬಹುತೇಕ ನಗರಗಳಲ್ಲಿ ಗ್ಯಾಸ್ ಏಜನ್ಸಿಗಳ ಕಡೆಗೆ ಗ್ರಾಹಕರ ದಂಡೇ ಹರಿದುಬರುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಲ್‌ಪಿಜಿ ಸಿಲಿಂಡರ್ ಗ್ರಾಹಕರಿಗೆ ಆಗಸ್ಟ್ 16 ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಕೊನೆಯ ದಿನವಾಗಿದೆ. ಈ ಗಡುವು ಸಮೀಪಿಸುತ್ತಿದ್ದಂತೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳ ಗ್ಯಾಸ್ ಏಜೆನ್ಸಿಗಳ ಮುಂದೆ ಸಾರ್ವಜನಿಕರು ಮುಗಿಬಿದ್ದಿದ್ದು, ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಸನ್ನಿವೇಶ ನಿರ್ಮಾಣವಾಗಿದೆ.

ಕೇಂದ್ರ ಸರ್ಕಾರದ ಸಬ್ಸಿಡಿಗೆ ಇ-ಕೆವೈಸಿ ಕಡ್ಡಾಯ
ಕೇಂದ್ರ ಸರ್ಕಾರದಿಂದ ಸಿಗುವ ಎಲ್‌ಪಿಜಿ ಸಬ್ಸಿಡಿ ಸೌಲಭ್ಯವನ್ನು ಪಡೆಯಲು ಪ್ರತಿಯೊಬ್ಬ ಗ್ರಾಹಕರೂ ಇ-ಕೆವೈಸಿ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳಾದ ಇಂಡೇನ್ (Indane), ಭಾರತ್ ಗ್ಯಾಸ್ (Bharat Gas) ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ (HP Gas) ತಮ್ಮ ಗ್ರಾಹಕರಿಗೆ ಆಗಸ್ಟ್ 16ರ ಒಳಗಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಈಗಾಗಲೇ ಸೂಚನೆ ನೀಡಿದ್ದವು.
ಎಲ್‌ಪಿಜಿ ಗ್ಯಾಸ್ ಬೆಲೆ, ಸಬ್ಸಿಡಿ ವಿವರ
* ಪ್ರಸ್ತುತ 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರವು ವಿವಿಧ ನಗರಗಳಲ್ಲಿ ಭಿನ್ನವಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಸಿಲಿಂಡರ್ ದರ 945 ರೂಪಾಯಿ ಇದೆ.
* ಉಜ್ವಲ ಯೋಜನೆ ಸಬ್ಸಿಡಿ: 'ಪ್ರಧಾನ ಮಂತ್ರಿ ಉಜ್ವಲ ಯೋಜನೆ' ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 300 ರೂಪಾಯಿ ಸಬ್ಸಿಡಿ ದೊರೆಯುತ್ತದೆ. ಆದ್ದರಿಂದ ಅವರಿಗೆ ಸಿಲಿಂಡರ್ 645 ರೂಪಾಯಿ ದರದಲ್ಲಿ ಲಭ್ಯವಾಗುತ್ತದೆ. ಇನ್ನೂ ಈ ಸಬ್ಸಿಡಿ ಸೌಲಭ್ಯವು ಆಗಸ್ಟ್ 16ರ ಒಳಗೆ ಇ-ಕೆವೈಸಿ ಮಾಡಿಸಿದ ಗ್ರಾಹಕರಿಗೆ ಮಾತ್ರ ಮುಂದುವರೆಯಲಿದೆ.
ಇ-ಕೆವೈಸಿ ಮಾಡಿಸದಿದ್ದರೆ ಏನಾಗಲಿದೆ?
ಆಗಸ್ಟ್ 16ರೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಗ್ರಾಹಕರು ಸಬ್ಸಿಡಿ ರಹಿತವಾಗಿ ಮಾರುಕಟ್ಟೆ ದರದಲ್ಲೇ (ಸಂಪೂರ್ಣ ಬೆಲೆ ನೀಡಿ) ಸಿಲಿಂಡರ್ ಖರೀದಿಸಬೇಕಾಗುತ್ತದೆ. ಇ-ಕೆವೈಸಿ ಮಾಡಿಸದ ಗ್ರಾಹಕರಿಗೆ ಕಮರ್ಷಿಯಲ್ ದರ ವಿಧಿಸಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ.
ಆದರೂ, ಗೃಹಬಳಕೆ ಸಬ್ಸಿಡಿ ದರದಲ್ಲಂತೂ ಸಿಲಿಂಡರ್ ಪಡೆಯಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ಎಲ್‌ಪಿಜಿ ಸಬ್ಸಿಡಿ ಸೌಲಭ್ಯ ಪಡೆಯುತ್ತಿರುವ ಗ್ರಾಹಕರು ತಕ್ಷಣವೇ ತಮ್ಮ ಗ್ಯಾಸ್ ಏಜೆನ್ಸಿಗೆ ತೆರಳಿ ಅಥವಾ ಆನ್‌ಲೈನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸುವುದು ಸೂಕ್ತವಾಗಿದೆ.


Click it and Unblock the Notifications
