Lokayukta Trap: ₹50 ಲಕ್ಷ ಕ್ಯಾಶ್…! ಹಣ ಕೈಗೆ ಬರುತ್ತಿದ್ದಂತೆ ಲೋಕಾ ಎಂಟ್ರಿ; ತಹಶೀಲ್ದಾರ್ ಸಿಕ್ಕಿಬಿದ್ದಿದ್ದು ಹೇಗೆ?
Lokayukta Trap: ಭೂಮಿಯ ದಾಖಲೆ ಸರಿಪಡಿಸಲು ಬರೋಬ್ಬರಿ ₹1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದ್ದು, ಅದರ ಮೊದಲ ಕಂತಿನ ₹50 ಲಕ್ಷ ಹಣ ಪಡೆಯುವಾಗಲೇ ಧಾರವಾಡದ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಧಾರವಾಡ ತಾಲ್ಲೂಕಿನ ಯಾರಿಕೊಪ್ಪದಲ್ಲಿ ನಡೆದಿರುವ ಈ ಪ್ರಕರಣದಲ್ಲಿ ತಹಶೀಲ್ದಾರ್ ಸಚಿದಾನಂದ ಕುಚನೂರು ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬುಧವಾರ ರಾತ್ರಿ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

Lokayukta Trap:1 ಎಕರೆ ಜಮೀನು..₹50 ಲಕ್ಷಕ್ಕೆ ಬೇಡಿಕೆ
ಯಾರಿಕೊಪ್ಪದಲ್ಲಿ ಡೆವಲಪರ್ ಒಬ್ಬರು ಸುಮಾರು 33 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನಿನ ದಾಖಲೆಗಳಲ್ಲಿ ಕೃಷಿ ಭೂಮಿ ಹಾಗೂ 'ಖರಾಬ್' ಎಂದು ನಮೂದಿಸಿರುವ ಭಾಗಗಳಿಗೆ ಸಂಬಂಧಿಸಿದಂತೆ ದಾಖಲೆ ತಿದ್ದುಪಡಿ ಹಾಗೂ ಹೊಸದಾಗಿ 'ಪೋಡಿ' ಮಾಡಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ಕೆಲಸ ಮಾಡಿಕೊಡಲು ತಹಶೀಲ್ದಾರ್ ಸಚಿದಾನಂದ ಕುಚನೂರು ಅವರು 1 ಎಕರೆ ಜಮೀನು ಹಾಗೂ ₹50 ಲಕ್ಷ ನಗದು ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಡೆವಲಪರ್ ಬುಧವಾರ ಮಧ್ಯಾಹ್ನ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು. ತಹಶೀಲ್ದಾರ್ ಹಣ ಪಡೆಯಲು ಧಾರವಾಡದ ಕೆಸಿಡಿ ಮೈದಾನದ ಬಳಿ ಬರುವಂತೆ ದೂರುದಾರರಿಗೆ ಸೂಚಿಸಿದ್ದರು.
ಅದರಂತೆ ದೂರುದಾರರು ₹50 ಲಕ್ಷ ಹಣವನ್ನು ಕೆಂಪು ಬಣ್ಣದ ಬ್ಯಾಗ್‌ನಲ್ಲಿ ತೆಗೆದುಕೊಂಡು ಸ್ಥಳಕ್ಕೆ ತೆರಳಿದ್ದರು. ಹಣವಿದ್ದ ಬ್ಯಾಗ್ ಅನ್ನು ದೂರುದಾರರು ತಹಶೀಲ್ದಾರ್‌ಗೆ ಹಸ್ತಾಂತರಿಸಿದ್ದು, ಅದನ್ನು ಅವರು ತಮ್ಮ ಬ್ಯಾಗ್‌ಗೆ ಹಾಕಿಕೊಂಡಿದ್ದಾರೆ. ಇದೇ ವೇಳೆ ಸುತ್ತುವರಿದಿದ್ದ ಲೋಕಾಯುಕ್ತ ಅಧಿಕಾರಿಗಳು ಸಚಿದಾನಂದ ಕುಚನೂರು ಅವರನ್ನು ಹಿಡಿದಿದ್ದಾರೆ ಎಂದು ಎಸ್‌ಪಿ ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ಹಿಂದಿನ 'ಪೋಡಿ' ರದ್ದುಪಡಿಸಿ ಹೊಸದಾಗಿ ಮಾಡುವಂತೆ ಆದೇಶ
ಜಮೀನಿನ ದಾಖಲೆ ತಿದ್ದುಪಡಿ ವಿಚಾರದಲ್ಲಿ ಜಂಟಿ ನಿರ್ದೇಶಕರು ಈಗಾಗಲೇ ಹಿಂದಿನ 'ಪೋಡಿ'ಯನ್ನು ರದ್ದುಪಡಿಸಿ, ಹೊಸದಾಗಿ 'ಪೋಡಿ' ನಡೆಸುವಂತೆ ಆದೇಶಿಸಿದ್ದರು. ಬಳಿಕ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಜಮೀನಿನ ದಾಖಲೆ ತಿದ್ದುಪಡಿ ಹಾಗೂ ಉಪವಿಭಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದ್ದರು.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಲಂಚದ ಬೇಡಿಕೆ ಇಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅದರ ಆಧಾರದ ಮೇಲೆ ಲೋಕಾಯುಕ್ತರು ಬಲೆ ಬೀಸಿದ್ದರು. ಸದ್ಯ ತಹಶೀಲ್ದಾರ್ ಸಚಿದಾನಂದ ಕುಚನೂರು ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅವರ ಕಚೇರಿ ಹಾಗೂ ನಿವಾಸ ಸೇರಿದಂತೆ ಇತರೆ ಸ್ಥಳಗಳಲ್ಲಿ ಪರಿಶೀಲನೆ ನಡೆಸುವ ಬಗ್ಗೆ ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ತಿಳಿಸಿದ್ದಾರೆ.


Click it and Unblock the Notifications
