ಕಮಲ-ದಳ ದೋಸ್ತಿ: ಕ್ಷೇತ್ರ ಹಂಚಿಕೆ ಇಂದೇ ಫೈನಲ್- ದಳಪತಿಗಳು ಕೇಳಿದ ಕ್ಷೇತ್ರಗಳು ಇಲ್ಲಿವೆ?
ದೆಹಲಿ,ಡಿಸೆಂಬರ್ 21: ಕರ್ನಾಟಕದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ. ಪಂಚರಾಜ್ಯಗಳ ಚುನಾವಣೆಯ ಬಳಿಕ ಬಿಜೆಪಿ ಹೈಕಮಾಂಡ್ ಮುಂದಿನ ಲೋಕಸಭಾ ಚುಣಾವಣೆಗೆ ಭರ್ಜರಿ ತಯಾರಿ ನಡೆಸಿದ್ದು, ಇಂದೇ ಕ್ಷೇತ್ರ ಹಂಚಿಕೆಯಾಗಲಿದೆ ಎನ್ನಲಾಗಿದೆ.
ಹೌದು, 28 ಲೋಕಸಭಾ ಕ್ಷೇತ್ರಗಳ ಫೈಕಿ ನಾಲ್ಕೈದು ಸ್ಥಾನಗಳನ್ನ ಜೆಡಿಎಸ್ ನಾಯಕರು ಕೇಳಿದ್ದಾರೆ ಎನ್ನಲಾಗಿದ್ದು, ಇಂದು ನರೇಂದ್ರ ಮೋದಿ ಅವರನ್ನ ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಭೇಟಿ ಮಾಡಿದ್ದಾರೆ. ಈ ವೇಳೆ ಕ್ಷೇತ್ರ ಹಂಚಿಕೆ ಸೇರಿದಂತೆ ರಾಜ್ಯದ ವಿಚಾರಗಳ ಕುರಿತು ಚರ್ಚಿಸಿದ್ದಾರೆ.

ಇನ್ನೂ ಕ್ಷೇತ್ರ ಹಂಚಿಕೆ ವಿಚಾರವಾಗಿ ಇಂದು (ಗುರುವಾರ) ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿ ಕ್ಷೇತ್ರಗಳನ್ನ ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ ಕೊನೆಯ ವಾರದಲ್ಲಿ ಕುಮಾರಸ್ವಾಮಿ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿ ಬಿಜೆಪಿಯಿಂದ ಯಾವುದೇ ಸಂವಹನವಿಲ್ಲದ ಕಾರಣ ಮಾತುಕತೆಯನ್ನು ಮುಂದಕ್ಕೆ ಕೊಂಡೊಯ್ಯಲು ಬಯಸಿದ್ದರು. ಎನ್‌ಡಿಎ ಸೇರುವ ಮುನ್ನ ಜೆಡಿಎಸ್ ಮುಖಂಡರೊಂದಿಗೆ ಮಾತುಕತೆ ನಡೆಸಲು ಬಿಜೆಪಿ ಸಿಎಂ ಸಾವಂತ್ ಅವರನ್ನು ನಿಯೋಜಿಸಿತ್ತು. ದೆಹಲಿಯಲ್ಲಿ ಅಮಿತ್ ಶಾ ಮತ್ತು ನಡ್ಡಾ ಅವರನ್ನು ಭೇಟಿಯಾದಾಗ ಮತ್ತು ಸೆಪ್ಟೆಂಬರ್ 22 ರಂದು ಎನ್‌ಡಿಎಗೆ ಸೇರ್ಪಡೆಗೊಂಡಾಗ ಸಾವಂತ್ ಜೆಡಿಎಸ್ ನಾಯಕರೊಂದಿಗೆ ಹಾಜರಿದ್ದರು.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ಆರು ಸೀಟುಗಳ ಬೇಡಿಕೆಯನ್ನ ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಪ್ರಾದೇಶಿಕ ಪಕ್ಷವು ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ಗೆ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಮೊದಲ ಸುತ್ತಿನ ಮಾತುಕತೆ ನಡೆಯಲಿದ್ದು,ಇಂದೇ ಕ್ಷೇತ್ರ ಹಂಚಿಕೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 1 ಸ್ಥಾನ ಗಳಿಸಿದ್ದವು. ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದು, ಇದೀಗ ಬಿಜೆಪಿ ಬೆಂಬಲಿಸಿದ್ದಾರೆ.












Click it and Unblock the Notifications