ದಿಂಗಾಲೇಶ್ವರ ಸ್ವಾಮಿಗಳಿಗೆ ಧನ್ಯವಾದ ತಿಳಿಸಿದ ಡಿ ಕೆ ಶಿವಕುಮಾರ್‌ : ಕಾರಣವೇನು?

ಹುಬ್ಬಳ್ಳಿ, ಮೇ 05 05: ಹುಬ್ಬಳ್ಳಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ದಿಂಗಾಲೇಶ್ವರ ಸ್ವಾಮಿಗಳು ನಾಮಪತ್ರವನ್ನ ವಾಪಸ್‌ ಪಡೆದಿದ್ದಾರೆ. ನಿಮ್ಮ ಊರಿನ ದಿಂಗಾಲೇಶ್ವರ ಸ್ವಾಮಿಗಳು ಪ್ರಹ್ಲಾದ್ ಜೋಶಿ ಅವರಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ಹೇಳುತ್ತಿದ್ದಾರೆ. ಧರ್ಮವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ನೋವಿನಿಂದ ಈ ಮಾತನ್ನು ಅವರು ಹೇಳುತ್ತಿದ್ದಾರೆ. ದಿಂಗಾಲೇಶ್ವರ ಸ್ವಾಮಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರೀತಿ ವಿಚಾರಕ್ಕೆ ಒಂದು ಕೊಲೆ ಆಗಿದೆ. ತಪ್ಪು, ತಪ್ಪೆ. ಶಿಕ್ಷೆ ಕೊಡಿಸುವುದು ನಮ್ಮ ಜವಾಬ್ದಾರಿ. ಆ ಆರೋಪಿಯನ್ನು ಒದ್ದು ಒಳಗೆ ಹಾಕಿದ್ಧೇವೆ. ಜೈಲಿಗೆ ಕಳಿಸಿದ್ಧೇವೆ, ಆತನಿಗೆ ಶಿಕ್ಷೆ ಆಗಿಯೇ ಆಗುತ್ತದೆ. ತಪ್ಪು ಮಾಡಿದವರನ್ನು ಕ್ಷಮಿಸುವ ಮಾತೇ ಇಲ್ಲ. ಈ ವಿಚಾರವನ್ನು ಬಿಜೆಪಿಯವರು ಮೆರೆಸಿದರು. ಆದರೆ ನೇಹಾ ತಂದೆ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿದರು. ದಾರಿ ತಪ್ಪಿದ್ದಾರೆಯೇ? ಈ ಕುಮಾರಸ್ವಾಮಿ ಬಿಜೆಪಿ ಪಾರ್ಟ್ನರ್. ಕೋನರೆಡ್ಡಿ ಅವರು ಅಲ್ಲೇ ಇದ್ದಿದ್ದು. ಸಾಕು ಅವರ ಸಹವಾಸ ಎಂದು ಈಗ ನಮ್ಮ ಪಾರ್ಟ್ನರ್ ಆಗಿದ್ದಾರೆ.

Lok Sabha Poll DK Shivakumar Thanked Dingaleshwar Swami

ಬಿಜೆಪಿ ಸರ್ಕಾರದಿಂದ ರೈತರಿಗೆ, ಜನರ ಬದುಕಿಗೆ ಯಾವುದೇ ಅನುಕೂಲ ಆಗಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬರುವ ಮುಂಚೆ ಹೇಳುತ್ತಿದ್ದರು. ವಿದೇಶದಲ್ಲಿ ಕಪ್ಪು ಹಣವಿದೆ, ಅದನ್ನು ತಂದು ಎಲ್ಲರ ಜನ್ ಧನ್ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಪ್ರಹ್ಲಾದ್ ಜೋಶಿ ಅವರು ಮೋದಿ ಅವರ ಆಪ್ತರು, ಮಂತ್ರಿಗಳಾಗಿದ್ದವರು ಎಲ್ಲರ ಖಾತೆಗೆ 15 ಲಕ್ಷ ಹಾಕಿಸಿದ್ದಾರೆಯೇ? ರೈತರ ಆದಾಯ ಡಬಲ್ ಮಾಡಿದ್ದಾರೆಯೇ? ಬಿಜೆಪಿ ಏನನ್ನು ಡಬಲ್ ಮಾಡಿದೆ ಎಂದು ಮತ ಹಾಕಬೇಕು.

ಮಹದಾಯಿ ಯೋಜನೆ ತಂದಿದ್ದೇವೆ ಎಂದು ಬಿಜೆಪಿಯವರು ವಿಜಯೋತ್ಸವ ಮಾಡಿದರು. ಆದರೆ ಇವತ್ತಿನ ತನಕ ಈ ಯೋಜನೆಗೆ ಅನುಮತಿ ಕೊಡಿಸಲು ಆಗಲಿಲ್ಲ. ಭ್ರದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಇದುವರೆಗೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಮಹಾದಾಯಿ ಯೋಜನೆಗೆ ಕೇಂದ್ರದವರು ಅನುಮತಿ ನೀಡುತ್ತಾರೋ ಬಿಡುತ್ತಾರೋ ಆದರೆ ನಾನು ಈಗಾಗಲೇ ಟೆಂಡರ್ ಕರೆದಿದ್ದೇನೆ. ಬಿಜೆಪಿಯವರು ಮನೆ ಬಳಿ ಬಂದರೆ ಏನು ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಬೇಕು. ಬಿಜೆಪಿಯವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಲಿಲ್ಲ.

ಭಾರತ್ ಜೋಡೋ ಪಾದಯಾತ್ರೆ ಮಾಡುವ ವೇಳೆ ಚಿಕ್ಕನಾಯಕನಹಳ್ಳಿಯ ಬಳಿ ತಾಯಿಯೊಬ್ಬಳು ರಾಹುಲ್ ಗಾಂಧಿ ಬಳಿ ಓಡಿ ಬಂದು ಸೌತೆಕಾಯಿ ಕೊಟ್ಟು, ʼಇದು ನಿಮ್ಮ ಅಜ್ಜಿ ಇಂದಿರಾಗಾಂಧಿ ಕೊಟ್ಟ ಜಮೀನಿನಲ್ಲಿ ಬೆಳೆದ ತರಕಾರಿʼ ಎಂದರು. ಉಳುವವನಿಗೆ ಭೂಮಿ ಕೊಟ್ಟಿದ್ದು, ಬಿಸಿಯೂಟ, ಹಾಲಿಗೆ ಸಹಾಯಧನ, ವೃದ್ದಾಪ್ಯ ವೇತನ, ಮೊಟ್ಟಮೊದಲ ಬಾರಿಗೆ ಉಚಿತ ವಿದ್ಯುತ್, ಶಿಕ್ಷಣ, ಅಕ್ಕಿ ಸೇರಿದಂತೆ ಅನೇಕ ಸೌಲಭ್ಯಗಳ ಕೊಟ್ಟಿರುವುದು ಕಾಂಗ್ರೆಸ್ ಪಕ್ಷ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಇಂತಹ ಒಂದೇ ಒಂದು ಯೋಜನೆ ಕೊಟ್ಟಿಲ್ಲ.

ಬಿಜೆಪಿಯವರು ಬರೀ ಬುಟ್ಟಿ ಬೇವಿನ ಸೊಪ್ಪು ಖಾಲಿ ಚೊಂಬು, ಖಾಲಿ ಡಬ್ಬ ಕೊಟ್ಟಿದ್ದಾರೆ. ಜನರಿಗೆ ಬಿಜೆಪಿಯವರ ಆ ಖಾಲಿ ಚೊಂಬನ್ನು ತೋರಿಸಲು ನಾವು ಹೊರಟಿದ್ದೇವೆ. ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಹೇಳುತ್ತಾರೆ. ನಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು. ಇದು 10 ವರ್ಷಗಳ ಸರ್ಕಾರ ಎಂದು ವಿಜಯೇಂದ್ರ ಅವರಿಗೆ ಗೊತ್ತಿಲ್ಲ ಎನಿಸುತ್ತದೆ.

ಬೆಲೆ ಏರಿಕೆ ಸಮಸ್ಯೆ ನಿವಾರಣೆಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಜನ ಗ್ಯಾರಂಟಿಗಳ ನಂಬುವುದಿಲ್ಲ ಎಂದು, ನನ್ನ ಹಾಗೂ ಸಿದ್ದರಾಮಯ್ಯ ಅವರ ಬಳಿ ಗ್ಯಾರಂಟಿ ಕಾರ್ಡ್ ಗಳಿಗೆ ಸಹಿ ಹಾಕಿಸಿ ಹಂಚುವಂತೆ ಸಲಹೆ ನೀಡಿದವರು ಪ್ರಿಯಾಂಕ ಗಾಂಧಿ. ಹೆಣ್ಣು ಕುಟುಂಬದ ಕಣ್ಣು, ಆದ ಕಾರಣ ನಮಗೆ ಹೆಣ್ಣು ಮಕ್ಕಳ ಮೇಲೆ ನಂಬಿಕೆ ಜಾಸ್ತಿ. ಆದ ಕಾರಣ ಹೆಚ್ಚಿನ ಯೋಜನೆಗಳನ್ನು ಮಹಿಳೆಯರ ಪರವಾಗಿ ನೀಡಿದ್ದೇವೆ.

ಕೊರೋನಾ ಸಮಯದಲ್ಲಿ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಊರಿಗೆ ಹೋಗಲು ಯಡಿಯೂರಪ್ಪ ಅವರು ಬಸ್ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಿದರು. ಆಗ ಕೆಪಿಸಿಸಿಯಿಂದ ಒಂದು ಕೋಟಿ ನೀಡಿ ಉಚಿತವಾಗಿ ಕಳುಹಿಸಿ ನೀಡಿ ಎಂದು ಕೊಟ್ಟಿದ್ದೆ. ಇದು ಇಡೀ ದೇಶಕ್ಕೆ ದೊಡ್ಡ ಮಾದರಿಯಾಯಿತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ಮಾಡಿದ ಪರಿಣಾಮ ಮಲೆಮಹದೇಶ್ವರ ಬೆಟ್ಟದಲ್ಲಿ 3 ಕೋಟಿ ಕಾಣಿಕೆ ಸಂಗ್ರಹವಾಗಿದೆ. ನನ್ನ ಹಾಗೂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಮಹಿಳೆಯರು ಅರ್ಚನೆ ಮಾಡಿಸುತ್ತಿದ್ದಾರೆ. ಇದಕ್ಕಿಂತ ಭಾಗ್ಯ ಏನಿದೆ.

ಬಂಗಾರಪ್ಪ ಅವರ ಸಮಯದಲ್ಲಿ ಆರಾಧನಾ ಯೋಜನೆ ತಂದು ಸಣ್ಣ, ಸಣ್ಣ ದೇವಸ್ಥಾನಗಳಿಗೆ ಹಣ ಕೊಡುವ ಯೋಜನೆ ತಂದರು. ಕಾಳಮ್ಮ, ಮಂಚಮ್ಮ, ಆಂಜನೇಯ, ಬಸವಣ್ಣನ ದೇವಸ್ಥಾನಗಳಿಗೆ ಹಣ ಕೊಡುವ ಯೋಜನೆ ತಂದಿದ್ದು ಕಾಂಗ್ರೆಸ್ ಪಕ್ಷ. ಜನರ ಜೇಬು ತುಂಬಬೇಕು, ಹೊಟ್ಟೆ ತುಂಬಬೇಕು. ನಮಗೆ ಇಟ್ಟಿರುವುದೇ ದೇವರ ಹೆಸರು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+