Lok Sabha Elections 2024: ಲೋಕಸಮರಕ್ಕೆ ಕೈ ಪಡೆ ತಯಾರಿ; ಟಾರ್ಗೆಟ್ 20! ಏನೇನು ಚರ್ಚೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 14: ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳ ಮೂಲಕ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಇದೀಗ ಲೋಕಸಮರಕ್ಕೆ ತಯಾರಿ ನಡೆಸುತ್ತಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಪಕ್ಷ ಸಂಘಟನೆ ಹಾಗೂ ಲೋಕಸಭೆ ಚುನಾವಣೆ ಸಿದ್ಧತೆಗೆ ವೇಗ ನೀಡುವ ಉದ್ದೇಶಕ್ಕಾಗಿ ರಾಜ್ಯ ಕಾಂಗ್ರೆಸ್ ಸಭೆ ಕರೆದಿದೆ.
ಹೌದು, ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಇಂದಿರಾಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ ಕರೆದಿದ್ದು, ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳು, ಸಚಿವರು, ಶಾಸಕರು ಹಾಗೂ ಎಲ್ಲಾ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಇನ್ನೂ ಸರ್ಕಾರದ ರಚನೆಯಾಗಿ ಮೂರು ತಿಂಗಳು ಮಾತ್ರ ಕಳೆದಿದ್ದು, ಸಚಿವರು ಹಾಗೂ ಶಾಸಕರ ನಡುವಿನ ಅಸಮಾಧಾನವನ್ನ ಶಮನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರು ಮುಂದಾಗಿದ್ದಾರೆ. ಅಲ್ಲದೇ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪಕ್ಷಕ್ಕಾಗಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ತಳಮಟ್ಟದಲ್ಲಿ ದುಡಿದವರನ್ನು ಮರೆತಿದೆ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನ ಸಮಾಧಾನಪಡಿಸಿ, ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ಈ ಸಭೆಯಲ್ಲಿ ನಡೆಯುವ ಸಾಧ್ಯತೆ ಇದೆ.
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನ ಮನೆ ಮನೆಗೂ ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ನಡೆಸುವ ನಿಟ್ಟಿನಲ್ಲೂ ಚರ್ಚೆ ನಡೆಯಲಿದೆ. ಈ ಹಿಂದೆ 2023 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಡಿದ ಅಭಿಮಾನಗಳ ರೀತಿಯನ್ನ ಮತ್ತೆ ಮುಂದುವರೆಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆಯಾಗಲಿದೆ. ಇನ್ನೂ ಸಚಿವ ಸ್ಥಾನ ಸಿಗದ ಹಿನ್ನಲೆ ಕೆಲ ನಾಯಕರು ಈಗಾಗಲೇ ಅಸಮಾಧಾನಗೊಂಡಿದ್ದಾರೆ. ಇತ್ತ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನ ಗುರುತಿಸಿ ನಿಗಮ-ಮಂಡಳಿ ನೇಮಕಕ್ಕೆ ಚಾಲನೆ ನೀಡುವ ಕುರಿತು ಚರ್ಚೆಯಾಗಲಿದೆ. ಎಲ್ಲಾ ರೀತಿಯಲ್ಲೂ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆಯಲಿದೆ ಎನ್ನಲಾಗಿದೆ.
ಈಗಾಗಲೇ ಸರ್ಕಾರದ ವಿರುದ್ದ ವಿಪಕ್ಷಗಳು ಸಾಕಷ್ಟು ತಂತ್ರಗಾರಿಕೆಯನ್ನ ನಡೆಸುತ್ತಿದ್ದು, ನಮ್ಮ ಸರ್ಕಾರದ ಕಾರ್ಯಯೋಜನೆಗಯನ್ನ ತಲುಪಿಸುವ ನಿಟ್ಟಿನಲ್ಲಿ ಮುಂದಾಗಬೇಕು ಹಾಗೂ ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸುವ ಮೂಲಕ, ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಲೇ ಬೇಕು ಎಂದು ಸಭೆಯಲ್ಲಿ ಕಾರ್ಯಕರ್ತರಿಗೆ ಟಾಸ್ಕ್ ನೀಡುವ ಸಾಧ್ಯತೆ ಇದೆ. ಇನ್ನೂ ಲೋಕಸಭಾ ಚುನಾವಣೆ ತಯಾರಿ, ಪಕ್ಷದ ಕಾರ್ಯಕ್ರಮ, ಹಾಗೂ ಬಿಜೆಪಿ ವಿರುದ್ದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಯಾವ್ಯಾವ ಕಾರ್ಯಕ್ರಮವನ್ನ ರೂಪಿಸಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ.

ಇನ್ನು ಸೋಮವಾರ ನಡೆಯುವ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಕೆಪಿಸಿಸಿ ಕಾಯರ್ಕಾರಿ ಸಮಿತಿ ಸದಸ್ಯರು, ಎಐಸಿಸಿ, ಕೆಪಿಸಿಸಿ ಸದಸ್ಯರು, ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, 2019ರ ಲೋಕಸಭೆ ಹಾಗೂ 2023ರ ವಿಧಾನಸಭೆ ಅಭ್ಯರ್ಥಿಗಳು, ರಾಜ್ಯ ಮಟ್ಟದ ಎಲ್ಲಾ ನಿಗಮ- ಮಂಡಳಿ ಮಾಜಿ ಅಧ್ಯಕ್ಷರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಲ್ಲಾ ಮುಂಚೂಣಿ ಘಟಕಗಳ ರಾಜ್ಯಾಧ್ಯಕ್ಷರುಗಳಿಗೆ ಸಭೆಯಲ್ಲಿ ಭಾಗವಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ನೋಟಿಸ್ ಮೂಲಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications