ಮತದಾನ: 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಭಾನುವಾರ ಅಂತ್ಯ
ಬೆಂಗಳೂರು, ಮೇ 04: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಮತದಾನದ 48 ಗಂಟೆಗಳ ಮೊದಲು ಅಂದರೆ ಭಾನುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮತದಾನದ ದಿನಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆದಿತ್ತು. ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ದೇಶದ 3ನೇ ಹಂತ ಮತ್ತು ಕರ್ನಾಟಕದ 2ನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯುತ್ತಿದೆ.

ಈಗಾಗಲೇ ಮತದಾನ ಪೂರ್ಣಗೊಳ್ಳುವ 72 ಮತ್ತು 48 ಗಂಟೆ ಪೂರ್ವದಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿಯಮ ನಿಬಂಧನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಮಾಹಿತಿ ನೀಡಲಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಯಾವ-ಯಾವ ನಿಯಮಗಳು?; ಚುನಾವಣಾ ಆಯೋಗ ಮೇ 5ರ ಭಾನುವಾರ ಸಂಜೆ 6 ಗಂಟೆಯಿಂದ ಮತದಾನ ದಿನವಾದ ಮೇ 7 ರಂದು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಾವಳಿಗಳನ್ನು ಹಾಗೂ ನಿಷೇಧಿಸಲಾಗಿರುವ ವಿಷಯಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಅವುಗಳನ್ನು ತಪ್ಪದೇ ಪಾಲಿಸಬೇಕೆಂದು ಸೂಚಿಸಿದೆ.
ಮತದಾನ ಶಾಂತಿಯುತವಾಗಿ, ನಿರ್ಭಯ, ಮುಕ್ತ ಮತ್ತು ಪಾರದರ್ಶಕವಾಗಿ ನಡೆಯಲು ಮತದಾರಸ್ನೇಹಿ ವಾತಾವರಣ ರೂಪಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾನ ಮುಕ್ತಾಯವಾಗುವ ಪೂರ್ವದ 72 ಮತ್ತು 48 ಗಂಟೆಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸಬೇಕಾದ ನಿಯಮಗಳು ಮುಖ್ಯವಾಗಿವೆ.
ಈ ಸಂದರ್ಭದಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳ ನಿಗಾವಹಿಸಲು ಹೆಚ್ಚುವರಿ ತಪಾಸಣಾ ತಂಡಗಳನ್ನು ರಚಿಸಲಾಗಿದೆ. ಮತದಾನ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿವರ್ಧಕವನ್ನು ಬಳಸಲು ಅನುಮತಿ ಇರುವುದಿಲ್ಲ.
ಚುನಾವಣಾ ಪ್ರಚಾರದ ಅವಧಿ ಮುಗಿದ ನಂತರ, ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ನಡೆಸುವಂತಿಲ್ಲ. ಮತ್ತು ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಇದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು, ಕ್ಷೇತ್ರದ ಹೊರಗಿನಿಂದ ಕರೆತಂದಿರುವ ಕಾರ್ಯಕರ್ತರು ಮತಕ್ಷೇತ್ರದ ಮತದಾರ ಆಗಿರದಿದ್ದಲ್ಲಿ ಅವರೆಲ್ಲರೂ ಜಿಲ್ಲೆಯಿಂದ ಹೊರಹೋಗಬೇಕಿದೆ.
ಪ್ರಜಾ ಪ್ರತಿನಿಧಿ ಕಾಯ್ದೆಯ ಪರಿಚ್ಛೇದ 126(1)(ಬಿ) ಪ್ರಕಾರ ಮತದಾನ ಪೂರ್ಣಗೊಳ್ಳುವ 48 ಗಂಟೆ ಮೊದಲು ಯಾವುದೇ ವ್ಯಕ್ತಿ ಯಾವುದೇ ಮತದಾನದ ಪ್ರದೇಶದಲ್ಲಿ ವಿಡಿಯೋ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ತೋರಿಸಲು ಅವಕಾಶವಿಲ್ಲ. ಇದನ್ನು ಚುನಾವಣಾ ಆಯೋಗ ನಿರ್ಬಂಧಿಸಿದ್ದು, ಉಲ್ಲಂಘಿಸಿದಲ್ಲಿ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.
ರಾಜ್ಯ ಅಥವಾ ಜಿಲ್ಲಾ ಎಂಸಿಎಂಸಿಯ ಪೂರ್ವ-ಪ್ರಮಾಣೀಕರಣವಿಲ್ಲದೆ ಯಾವುದೇ ರಾಜಕೀಯ ಜಾಹೀರಾತುಗಳನ್ನು ಎಲ್ಲಾ ಹಂತದಲ್ಲಿ ಹಾಗೂ ಮತದಾನದ ದಿನ ಮತ್ತು ಚುನಾವಣಾ ಪೂರ್ವ ದಿನದಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಚುನಾವಣೆಯ ಕೊನೆಯ ಹಂತದಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ಮುದ್ರಣ ಮಾಧ್ಯಮದ ಮೂಲಕ ಯಾವುದೇ ಅಪರಾಧ ಅಥವಾ ತಪ್ಪುದಾರಿಗೆಳೆಯುವ ರಾಜಕೀಯ ಜಾಹೀರಾತುಗಳನ್ನು ತಪ್ಪಿಸಲು ಈ ನಿಯಮ ಮಾಡಲಾಗಿದೆ.
ಅಂದಹಾಗೆ ಮೇ 7ರ ಮಂಗಳವಾರ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ಧಾರವಾಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications