K Sudhakar: ಲೋಕಸಭಾ ಚುನಾವಣಾ ಬೆನ್ನಲ್ಲೇ ಮತ್ತೆ ಕಾಂಗ್ರೆಸ್ ಸೇರುತ್ತಾರಾ ಮಾಜಿ ಸಚಿವ ಸುಧಾಕರ್!?
ಬೆಂಗಳೂರು, ಫೆಬ್ರವರಿ.22: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅನೇಕ ಮಾಜಿ ಶಾಸಕರು ಮತ್ತು ಸಚಿವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಅವರಲ್ಲಿ ಮೊದಲ ಸಾಲಿನಲ್ಲಿ ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಬರುತ್ತಾರೆ. ಕೆಲವೊಂದು ಪ್ರೆಸ್ ಮೀಟ್ ಮಾಡಿದ್ದು ಬಿಟ್ಟರೇ ಮತ್ತೆ ಕಾಣಿಸಿಕೊಂಡಿರುವುದು ಅಷ್ಟಕಷ್ಟೆ.
ಈಗ ಮಾಜಿ ಸಚಿವ ಸುಧಾರಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಕೂಡ ಪಕ್ಷಾಂತರದ ಕಾರಣಕ್ಕೆ. ಹೌದು ಅಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿ ಜೊತೆಗೆ ಸೇರಿಕೊಂಡಿದ್ದ ಅವರು, ಈಗ ಮತ್ತೆ ತಮ್ಮ ಮಾತೃಪಕ್ಷಕ್ಕೆ ಬರುತ್ತಾರೆ ಎಂಬ ಸುದ್ದಿ ಹರಡುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಎರಡು ತಿಂಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಕಾಣಿಸಿಕೊಂಡಿದ್ದರು.

ಮತ್ತೆ ಕೈ ಹಿಡಿತಾರಾ ಮಾಜಿ ಸಚಿವ ಸುಧಾಕರ್?
ಬಿಜೆಪಿ ನಾಯಕ ಕೆ ಸುಧಾಕರ್ ಮತ್ತೆ ಕಾಂಗ್ರೆಸ್‌ಗೆ ವಾಪಸ್ ಆಗುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್ ನಾಯಕರ ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.
ವಿಧಾನಸಭಾ ಚುನಾವಣೆಯಲ್ಲಿ ಸಚಿವರ ವಿರುದ್ಧ ತೊಡೆ ತಟ್ಟಿ, ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ ಈ ವಿಷಯದಲ್ಲಿ ತಲೆ ತೂರಿಸುತ್ತಿಲ್ಲ ಎಂದು ವರದಿಯಾಗಿದೆ. ಈ ವಿಷಯಗಳಲ್ಲಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ ಶಾಸಕ ಪ್ರದೀಪ್ ಈಶ್ವರ್.

ಲೋಕಸಭಾ ಟಿಕೆಟ್‌ಗಾಗಿ ಸುಧಾಕರ್ ಲಾಬಿ!?
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿರುವ ಮಾಜಿ ಸಚಿವ ಕೆ.ಸುಧಾಕರ್, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೇಳಿದ್ದಾರೆ. ಆದರೆ, ಅವರಿಗೆ ಅಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ. ಚುನಾವಣಾ ಸೋಲಿನ ನಂತರ ಎಲ್ಲೂ ಕಾಣಿಸಿಕೊಳ್ಳದ ಅವರು, ಈಗ ಮತ್ತೆ ಮುನ್ನಲೆಗೆ ಬರುತ್ತಿದ್ದಾರೆ. ಅದು ಕೂಡ ಲೋಕಸಭಾ ಚುನಾವಣಾ ಕಾರಣಕ್ಕೆ.
ಡಿಸೆಂಬರ್‌ನಲ್ಲಿ ನಡೆದ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರ ಪುತ್ರಿಯ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಕೆ ಸುಧಾಕರ್ ಮತ್ತು ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಮಾಜಿ ಸಚಿವ, ಯಶವಂತಪುರ ಹಾಲಿ ಶಾಸಕ ಎಸ್‌ಟಿ ಸೋಮಶೇಖರ್ ಕೂಡ ಜೊತೆ ಸೇರಿಕೊಂಡಿದ್ದರು. ಆಗಿನಿಂದಲೇ ಈ ವದಂತಿ ಹರಡಿತ್ತು.
ಇನ್ನು, ಕೆ ಸುಧಾಕರ್ ಕಾಂಗ್ರೆಸ್ ಸೇರಲು ಡಿಕೆ ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಈ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಆದರೆ, ಚುನಾವಣಾ ಸಮಯದಲ್ಲಿ ಯಾವಾಗ ಏನಾಗಲಿದೆಯೋ..? ಯಾವ ಪಕ್ಷದ ಲೆಕ್ಕಾಚಾರ ಹೇಗಿರಲಿದೆಯೋ ಕಾದು ನೋಡಬೇಕು.












Click it and Unblock the Notifications