ಲೋಕ ಅಖಾಡಕ್ಕೆ ಸಜ್ಜಾಗುತ್ತಿರುವ ಕಮಲದಳ ನಾಯಕರು, ಒಗ್ಗಟ್ಟಿನ ಜಪ ಶುರು: ಮುಂದೇನು..?
ಬೆಂಗಳೂರು, ಜನವರಿ 06: 2024ರ ಲೋಕಸಭಾ ಚುನಾವಣೆಯನ್ನು ಎದುರಿಸಲು ರಾಜ್ಯದಲ್ಲಿ ಎನ್‌ಡಿಎ ಜೊತೆ ಜೆಡಿಎಸ್ ಕೈಜೋಡಿಸಿದ್ದು, ಈ ಸಂಬಂಧ ಹೈಕಮಾಂಡ್ ಮಟ್ಟದಲ್ಲಿ ಎರಡು ಪಕ್ಷಗಳ ಹಿರಿಯ ನಾಯಕರು ಮಾತುಕತೆ ನಡೆಸಿ ಅಂತಿಮ ತೀರ್ಮಾನಕ್ಕೂ ಬಂದಿದ್ದಾರೆ.
ಆರಂಭದಲ್ಲಿ ಮೈತ್ರಿ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಜೆಡಿಎಸ್ ನ ಕೆಲವು ನಾಯಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಹೀಗಾಗಿ ಮೈತ್ರಿ ಗಟ್ಟಿಯಾಗಲ್ಲ ಎಂಬುದಾಗಿ ಜನ ಮಾತನಾಡಿಕೊಂಡಿದ್ದರು. ಆದರೀಗ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಹಳೆಯ ಮುನಿಸುಗಳಿಗೆ ಮುಲಾಮು ಹಚ್ಚಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದು ಎದ್ದು ಕಾಣಿಸುತ್ತಿದೆ.

ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವ ವಿಚಾರ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿಯೇ ಜೆಡಿಎಸ್ ವರಿಷ್ಠ ದೇವೇಗೌಡರು ಸೇರಿದಂತೆ ಒಂದಷ್ಟು ನಾಯಕರನ್ನು ಕೈ ನಾಯಕರು ಗೇಲಿ ಮಾಡಿ ಸಂತಸ ಪಟ್ಟಿದ್ದರು. ಮಾಜಿ ಪ್ರಧಾನಿ ದೇವೇಗೌಡರೇ ಜನರ ಮುಂದೆ ಬಂದು ತಾವು ಏಕೆ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ ಎಂಬುದಕ್ಕೆ ಕಾರಣಗಳನ್ನು ನೀಡಿದ್ದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾತುಕತೆಯಾಗಿ ಹಲವು ತಿಂಗಳುಗಳೇ ಕಳೆದಿವೆ. ಇದೆಲ್ಲ ಹೆಚ್ಚು ದಿನ ನಡೆಯಲ್ಲ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸೀಟು ಹಂಚಿಕೆ ವಿಚಾರದಲ್ಲಿ ಮನಸ್ತಾಪವಾಗಿ ಮೈತ್ರಿ ಕಳಚಿ ಬೀಳುತ್ತದೆ. ಅದಕ್ಕಿಂತ ಹೆಚ್ಚಾಗಿ ಕಳೆದ ಬಾರಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ನೆಲಕಚ್ಚಿತ್ತು. ಹೀಗಾಗಿ ಈ ಬಾರಿ ಬಿಜೆಪಿ ನೆಲಕಚ್ಚುತ್ತದೆ ಎಂಬ ಮಾತುಗಳನ್ನು ಕೆಲವು ನಾಯಕರು ಬಹಿರಂಗವಾಗಿಯೇ ಹೇಳಿದ್ದರು.

ಮೈತ್ರಿ ವಿರುದ್ಧ ಸಮರ ಸಾರಿರುವ ಸಿಎಂ ಇಬ್ರಾಹಿಂ
ಮೈತ್ರಿ ಮಾತುಕತೆ ಬಳಿಕ ಜೆಡಿಎಸ್‌ನಲ್ಲಿ ಒಂದಷ್ಟು ಬೆಳವಣಿಗೆಯಾಗಿವೆ. ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದನ್ನು ಜೆಡಿಎಸ್ ಅಧ್ಯಕ್ಷರಾಗಿದ್ದ ಸಿ.ಎಂ ಇಬ್ರಾಹಿಂ ಖಂಡಿಸಿ ಹೊರ ಉಳಿದಿದ್ದರು. ಹೀಗಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಯಿತು. ಸದ್ಯ ಇಬ್ರಾಹಿಂ ಪಕ್ಷದ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಉಳಿದಂತೆ ಕೆಲವರು ಆರಂಭದಲ್ಲಿ ವಿರೋಧ ಮಾಡಿದ್ದರೂ ಸದ್ಯ ಮೌನಕ್ಕೆ ಜಾರಿದ್ದಾರೆ. ಮುಂದೆ ಅವರ ತೀರ್ಮಾನವೇನು ಎಂಬುದು ಗೊತ್ತಾಗಬೇಕಿದೆ.
ಇನ್ನು ಜೆಡಿಎಸ್ ನಾಯಕರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿರುವುದು ಕೂಡ ಅಚ್ಚರಿ ಮೂಡಿಸುತ್ತಿದೆ. ಪಕ್ಷದ ಉಳಿವಿಗಾಗಿ ಈ ತೀರ್ಮಾನ ಕೈಗೊಂಡರಾ ಗೊತ್ತಿಲ್ಲ. ಆದರೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಚೆನ್ನಾಗಿಯೇ ಆಗುತ್ತದೆ ಎಂಬುದಕ್ಕೆ ಜೆಡಿಎಸ್ ಮತ್ತು ಬಿಜೆಪಿ ಸೇರಿ ರಚಿಸಿದ ಸರ್ಕಾರ ಸಾಕ್ಷಿಯಾಗಿದೆ. 20 ತಿಂಗಳ ಕಾಲ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು ಕೊಂಡು ಉತ್ತಮ ಆಡಳಿತ ನೀಡಿದ್ದರು ಎನ್ನುವುದು ಈಗಲೂ ಜನರಲ್ಲಿದೆ.

ಕಾರ್ಯಕರ್ತರ ಮಧ್ಯೆ ಒಮ್ಮತ ಅಗತ್ಯ
ಆದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಹೋದ ಜೆಡಿಎಸ್ ಅಧಿಕಾರ ಪಡೆದರೂ ತಳಮಟ್ಟದಲ್ಲಿ ಕಾರ್ಯಕರ್ತರು ಒಗ್ಗೂಡಿರಲಿಲ್ಲ ಇದರ ಪರಿಣಾಮ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಇವತ್ತು ಅವತ್ತಿನ ಸೋಲನ್ನು ಎರಡು ಪಕ್ಷಗಳ ನಾಯಕರು ತಮಗೆ ತೋಚಿದಂತೆ ವಿಶ್ಲೇಷಣೆ ಮಾಡಿದರೂ ಕಾರ್ಯಕರ್ತರು ಒಂದಾಗದಿದ್ದರೆ ಮೇಲ್ಮಟ್ಟದ ನಾಯಕರು ಮೈತ್ರಿ ಮಾಡಿಕೊಂಡರೂ ಸಫಲತೆ ಕಾಣಲ್ಲ ಎಂಬುದಂತು ಸತ್ಯ.
ಕಾಂಗ್ರೆಸ್ ಮತ್ತು ಜೆಡಿಎಸ್ ಹುಟ್ಟು ಎದುರಾಳಿಗಳು ಬಹುತೇಕ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿಯಿದೆ. ಗ್ರಾಮಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತೀವ್ರ ಹೋರಾಟಗಳನ್ನು ಎರಡು ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ರೈತರ ಮತ್ತು ಅಲ್ಪ ಸಂಖ್ಯಾತ ಮತಗಳನ್ನು ಸೆಳೆದು ಜೆಡಿಎಸ್ ಕಾಂಗ್ರೆಸ್ ಗೆ ಟಕ್ಕರ್ ನೀಡಿತ್ತು. ಆದರೆ ಬದಲಾದ ಕಾಲದಲ್ಲಿ ಅಲ್ಪಸಂಖ್ಯಾತ ಮತಗಳು ಜೆಡಿಎಸ್ ಬಿಟ್ಟು ಹೋಗಿವೆ.
ಜೆಡಿಎಸ್ ಮತ ಕಸಿದಿದ್ದ ಬಿಜೆಪಿ
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಬಗ್ಗೆ ಮೃಧು ಧೋರಣೆ ತಾಳಿತ್ತು. ಚುನಾವಣೆ ಬಳಿಕ ತಮಗೆ ಬೆಂಬಲ ನೀಡುತ್ತದೆ ಎಂದು ನಾಯಕರು ಭಾವಿಸಿದ್ದರು. ಆದರೆ ಕೊನೆಗಳಿಗೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದರು. ಹೀಗಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಬಗ್ಗೆ ಮೃಧುಧೋರಣೆ ತಾಳದೆ ಟಾರ್ಗೆಟ್ ಮಾಡಿದ್ದರು. ಪರಿಣಾಮ ಜೆಡಿಎಸ್‌ಗೆ ಬೀಳಬೇಕಾದ ಬಹುತೇಕ ಮತಗಳು ಒಡೆದು ಬಿಜೆಪಿಗೆ ಸೇರಿತ್ತು ಪರಿಣಾಮ ಕಾಂಗ್ರೆಸ್ ಗೆ ಗೆಲುವು ಸುಲಭವಾಯಿತು.
ಇದೆಲ್ಲವನ್ನು ಮನಗಂಡಿರುವ ಜೆಡಿಎಸ್ ನಾಯಕರು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದರೆ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡಲು ಅನುಕೂಲವಾಗುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಜೊತೆಗೆ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎಯನ್ನು ಗೆಲ್ಲಿಸಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಹೋಗುವ ತೀರ್ಮಾನಕ್ಕೆ ಬಂದಿದ್ದಾರೆ. ಒಂದು ಕಾಲದಲ್ಲಿ ಹಾವು ಮುಂಗುಸಿಯಂತೆ ವರ್ತಿಸುತ್ತಿದ್ದ ಎರಡು ಪಕ್ಷಗಳ ನಾಯಕರು ಒಂದೆಡೆ ಸೇರಿ ಹಳೆಯದನ್ನು ಮರೆತು ಹೊಸ ಹೆಜ್ಜೆಯಿಡಲು ತೀರ್ಮಾನಗಳನ್ನು ಕೈಗೊಂಡಿದ್ದಾರೆ.
ಮೈತ್ರಿ ಹೆಜ್ಜೆ ಹೇಗಿರಲಿದೆ ಎಂಬುದೇ ಪ್ರಶ್ನೆ?
ಎಲ್ಲವೂ ಸರಿ ಹೋದರೆ ಮುಂದಿನ ಫೆಬ್ರವರಿ ವೇಳೆಗೆ ಎರಡು ಪಕ್ಷಗಳ ನಾಯಕರು ಒಗ್ಗಟ್ಟಾಗಿ ಲೋಕಸಭಾ ಚುನಾವಣಾ ಅಖಾಡಕ್ಕೆ ಒಟ್ಟಾಗಿ ಧುಮುಕುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ರಾಜ್ಯ ಪ್ರವಾಸ ಮಾಡಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ನಾಯಕರ ಸಭೆ ಮಾಡಿ ಚರ್ಚಿಸಿ ಚುನಾವಣೆಯ ರೂಪುರೇಷೆಗಳ ಬಗ್ಗೆ ತಿಳಿಸುವ ಸಾಧ್ಯತೆಯಿದೆ. ಅದು ಏನೇ ಇರಲಿ ಎರಡು ಪಕ್ಷಗಳು ಒಟ್ಟಾಗಿ ಹೇಗೆ ಚುನಾವಣೆಗೆ ಹೋಗುತ್ತಾರೆ ಎಂಬುದೇ ಸದ್ಯಕ್ಕಿರುವ ಕುತೂಹಲವಾಗಿದೆ.












Click it and Unblock the Notifications