ಒಂದಲ್ಲ, ಎರಡು IPL - ಬೆಟ್ಟಿಂಗ್ ದಂಧೆ ಶುರು
ಬೆಂಗಳೂರು, ಏಪ್ರಿಲ್ 18- ಈ ಬಾರಿ ಎರಡು ಐಪಿಎಲ್ ಗಳು ನಡೆಯುತ್ತಿವೆ. ಒಂದು ಕ್ರಿಕೆಟ್ಟಿನಲ್ಲಿ- ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೊಂದು ರಾಜಕೀಯ ಕ್ಷೇತ್ರದಲ್ಲಿ- ಇಂಡಿಯನ್ ಪೊಲಿಟಿಕಲ್ ಲೀಗ್.
ಲೋಕಸಭೆ ಚುನಾವಣೆ ನಿನ್ನೆಯಷ್ಟೇ ಮುಗಿದಿದ್ದು, ಅಭ್ಯರ್ಥಿಗಳು ಒಬ್ಬೊಬ್ಬರಾಗಿ/ ತಂಡೋಪಾದಿಯಾಗಿ ದಣಿವಾರಿಸಿಕೊಳ್ಳಲು ನಾನಾ ಕಡೆ ಮುಖ ಮಾಡಿದ್ದಾರೆ. ಈ ಮಧ್ಯೆ Indian Premier League ಶುರುವಾಗಿ ಮೂರು ದಿನವಾಗಿದೆ. ಪ್ರತಿ ವರ್ಷದಂತೆ IPL ಬೆಟ್ಟಿಂಗ್ ಅಬಾಧಿತವಾಗಿ ನಡೆದಿದೆ. ಆದರೆ ಈ ವರ್ಷ IPL ಜತೆಗೆ, Indian Poilitical League ಅಂದರೆ ಲೋಕಸಭಾ ಚುನಾವಣೆ ಸಹ ಒಟ್ಟಿಗೇ ಜರುಗುತ್ತಿದ್ದು ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆದಿದೆ.

ರಾಜ್ಯದಲ್ಲಿ ಮೋದಿ ಅಲೆ ಮೇಲೆ ಭಾರೀ ಬೆಟ್ಟಿಂಗ್ ಕಟ್ಟಲಾಗಿದೆ. ಬಿಜೆಪಿ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುತ್ತದೆ ಎಂಬ ಅಂಶದ ಮೇಲೆ ಅತಿ ಹೆಚ್ಚು ಹಣವನ್ನು ಪಣಕ್ಕಿಡಲಾಗಿದೆ. ಇನ್ನು ಮಾಜಿ ಪ್ರಧಾನಿ ಸೇರಿದಂತೆ ಆರು ಮಾಜಿ ಮುಖ್ಯಮಂತ್ರಿಗಳು ಕಣದಲ್ಲಿರುವ ಕ್ಷೇತ್ರದಲ್ಲೂ ಕೂಡ ಬಾಜಿ ದಂಧೆ ಜೋರಾಗಿಯೇ ನಡೆದಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆದಿದ್ದು ಕುಮಾರಸ್ವಾಮಿ ಪರವಾಗಿ ಹೆಚ್ಚು ಜನ ಬೆಟ್ಟಿಂಗ್ ಕಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಮತ್ತು ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಅವರ ಮೇಲೆ ಹೆಚ್ಚು ಹಣವನ್ನು ಪಣಕ್ಕಿಡಲಾಗಿದೆ. ಇನ್ನು ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವೆ ನೇರ ಸ್ಪರ್ಧೆಯಿದ್ದು ಅವರ ಅಭಿಮಾನಿಗಳು ಬಾಜಿ ದಂಧೆಯಲ್ಲಿ ತೊಡಗಿದ್ದಾರೆ.
ಯಡಿಯೂರಪ್ಪ ಗೆದ್ದೇ ಗೆಲ್ಲುತ್ತಾರೆ, ಗೀತಾ ಶಿವರಾಜ್ ಕುಮಾರ್ ಸೋಲಲು ಸಾಧ್ಯವೇ ಇಲ್ಲ ಎಂಬ ಮಾತುಗಳ ಆಧಾರದಲ್ಲಿ ಕೋಟ್ಯಂತರ ರೂ ಬೆಟ್ಟಿಂಗ್ ವಹಿವಾಟು ನಡೆದಿದೆ.
ಬೆಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮೇಲೆ ಹೆಚ್ಚು ಬೆಟ್ಟಿಂಗ್ ಕಟ್ಟಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೂಡ ರಾಜಕಾರಣಿಗಳ ಬೆಂಬಲಿಗರು ತಮ್ಮ ಅಭ್ಯರ್ಥಿಗಳ ಪರವಾಗಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿನ ವಿಶ್ವಾಸದೊಂದಿಗೆ ಸಾಕಷ್ಟು ಹಣವನ್ನು ಬಾಜಿಗಿಟ್ಟಿದ್ದಾರೆ ಎನ್ನುವ ಅಂಶಗಳು ಕೇಳಿ ಬಂದಿವೆ.
ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಾದ ರಮ್ಯಾ ಮತ್ತು ಪುಟ್ಟರಾಜು ಅವರ ಚುನಾವಣೆ ಫಲಿತಾಂಶದ ಮೇಲೆ ಅಪಾರ ಹಣವನ್ನು ಪಣಕ್ಕಿಡಲಾಗಿದೆ. ಈ ಚುನಾವಣೆಯ ಫಲಿತಾಂಶ ರಾಜ್ಯದ ರಾಜಕೀಯ ದಿಕ್ಕನ್ನು ಬದಲಿಸುತ್ತದೆ ಎಂಬ ಮಾತುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೂ ಬಾಜಿ ಕಟ್ಟಲಾಗಿದೆ. ಕಾಂಗ್ರೆಸ್ ಕಡಿಮೆ ಸ್ಥಾನ ಗಳಿಸಿದರೆ ಮುಖ್ಯಮಂತ್ರಿ ಪಟ್ಟ ಹೋಗೋದು ಗ್ಯಾರಂಟಿ ಎಂದೂ ಹಲವರು ಹಣವನ್ನು ಬಾಜಿಗಿಟ್ಟಿರುವ ಅಂಶ ಕೇಳಿಬಂದಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಅವರ ಮೇಲೆ ಹೆಚ್ಚು ಹಣ ಕಟ್ಟಲಾಗಿದೆ. ಅದೇ ರೀತಿ ಮೈಸೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಬಾಜಿ ಕಟ್ಟಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಸ್ಪರ್ಧಿಸಿರುವ ಧಾರವಾಡ ಕ್ಷೇತ್ರದಲ್ಲೂ ಕೂಡ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ.
ಒಟ್ಟಾರೆ ಎಲೆಕ್ಷನ್ ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಬಾಜಿ ದಂಧೆ ಈಗಿನಿಂದಲೇ ಶುರುವಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ. ಚುನಾವಣೆ ಫಲಿತಾಂಶದ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಬೆಟ್ಟಿಂಗ್ ದಂಧೆ ಮತ್ತಷ್ಟು ಹೆಚ್ಚಾಗಲಿದೆ.












Click it and Unblock the Notifications