ಸಚಿವ ಸಂಪುಟ ವಿಸ್ತರಣೆಗೆ ಬೇಡಿಕೆ ಇಟ್ಟ ಶಾಸಕರು
ಬೆಂಗಳೂರು, ಏ. 28 : ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಮೊದಲೇ ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ವಿಸ್ತರಣೆ ಮಾತುಗಳು ಕೇಳಿಬರುತ್ತಿವೆ. ಉತ್ತರ ಕರ್ನಾಟಕದ ಪ್ರಮುಖ ನಾಯಕರು ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿ ಇರುವ ಮೂರು ಸಚಿವ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದು, ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳುವಂತೆ ಬಹಳದಿನಗಳಿಂದ ಒತ್ತಾಯ ಮಾಡುತ್ತಿರುವ ಹಿರಿಯ ಕಾಂಗ್ರೆಸ್ ನಾಯಕರಾದ ಮಾಲೀಕಯ್ಯ ಗುತ್ತೇದಾರ್, ಕೆ.ಬಿ.ಕೋಳಿವಾಡ, ಮಾಲಕ ರೆಡ್ಡಿ ಮುಂತಾದ ನಾಯಕರು ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಜಪ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ ಇವರು ಮೇ 12ರಂದು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ. [ಫಲಿತಾಂಶ ಬರುತ್ತಿದ್ದಂತೆ ಸಿದ್ದರಾಮಯ್ಯ ಸಂಪುಟ ವಿಸ್ತರಣೆ]

ಫೆಬ್ರವರಿ ತಿಂಗಳಿನಲ್ಲಿಯೇ ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರು ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ದೆಹಲಿಗೆ ತೆರಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಮರಳಿದ್ದರು. [ಸಿಎಂ ವಿಶ್ರಾಂತಿ ಅಂತ್ಯ, ಆಡಳಿತದತ್ತ ಗಮನ]
ಆಗ ಲೋಕಸಭೆ ಚುನಾವಣೆ ಮುಗಿಯುವ ತನಕ ಕಾಯಿರಿ ಎಂಬ ಸಂದೇಶವನ್ನು ಹೈಕಮಾಂಡ್ ನಾಯಕರು ನೀಡಿದ್ದರು. ಆದ್ದರಿಂದ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಆರಂಭಿಸಿದ್ದಾರೆ. ಜೂನ್ ಮೊದಲನೇ ವಾರದೊಳಗೆ ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ವರಿಷ್ಠರ ಜೊತೆ ಮಾತುಕತೆ ನಡೆಸಲು ದೆಹಲಿಗೆ ಹೋಗಲು ತಯಾರಿ ನಡೆಸಿದ್ದಾರೆ.
ಸದ್ಯ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ 31 ಸಚಿವರಿದ್ದು, ಮೂರು ಸ್ಥಾನಗಳು ಖಾಲಿ ಇವೆ. ಇವುಗಳಿಗೆ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಆಯ್ಕೆ ಮಾಡುವಂತೆ ಹಲವಾರು ದಿನಗಳಿಂದ ಬೇಡಿಕೆ ಇಡಲಾಗುತ್ತದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸಂಪುಟ ವಿಸ್ತರಣೆ ಆಗುತ್ತಾ?












Click it and Unblock the Notifications