LKG & UKG: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭದ ಬಗ್ಗೆ ಬಿಗ್ ಅಪ್ಡೇಟ್
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ. ಸದ್ಯ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತ್ರವೇ ಮಕ್ಕಳಿಗೆ ಕಲಿಕೆಗೆ ಆರಂಭವಾಗುತ್ತಿತ್ತು. ಹೀಗಾಗಿ ಎಲ್‌ಕೆಜಿ, ಯುಕೆಜಿ ತರಗತಿಗಳಿಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದರು. ಆದರೆ ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಶುರುವಾಗಲಿವೆ. ಅದು ಯಾವಾಗ? ಮತ್ತು ಹೇಗೆ? ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ LKG, UKG ಆರಂಭವಾಗಲಿದೆ. ಪ್ರಸಕ್ತ ವರ್ಷದಿಂದಲೇ ಕರ್ನಾಟಕ ರಾಜ್ಯದಲ್ಲಿರುವ 4,056 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳಾದ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸಲಾಗುತ್ತಿದೆ ಎಂದು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಎಲ್.ಕೆ.ಜಿ, ಯು.ಕೆ.ಜಿ ಅಭ್ಯಾಸ ಪುಸ್ತಕಗಳನ್ನು ವಿತರಿಸಲಾಗುವುದು. ಪೂರ್ವ ಪ್ರಾಥಮಿಕ ತರಗತಿಗಳನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ನಡೆಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಯಾವ ಶಾಲೆಗಳಲ್ಲಿ ಆರಂಭ?
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ 1,105 ಶಾಲೆಗಳು, 126 ಪಿ.ಎಂ.ಶ್ರೀ ಶಾಲೆಗಳು, ಕೆ.ಕೆ.ಆರ್.ಡಿ.ಬಿ. ಯೋಜನೆಯಡಿ 1,126 ಶಾಲೆಗಳು ಮತ್ತು 1,699 ಮ್ಯಾಗ್ನೆಟ್ ಶಾಲೆಗಳು ಸೇರಿ ಒಟ್ಟು 4,056 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳಾದ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸಲಾಗುತ್ತಿದ್ದು, ಪೂರ್ವ ಪ್ರಾಥಮಿಕವನ್ನು ತರಗತಿವಾರು ಪ್ರತ್ಯೇಕವಾಗಿ ದ್ವಿಭಾಷಾ ಮಾಧ್ಯಮದಲ್ಲಿ ನಡೆಸಲು ಕ್ರಮವಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಬಲಪಡಿಸಲು ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಸಕ್ತ ಸಾಲಿನಲ್ಲಿ ಆರಂಭಿಸಲು ಶಿಕ್ಷಣ ಇಲಾಖೆ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ರಾಜ್ಯದಲ್ಲಿ ಈಗಾಗಲೇ 2,619 ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದ್ದು, ಇದರಲ್ಲಿ 90,195 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆ ಉಳಿದ ಶಾಲೆಗಳಿಗೂ ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳನ್ನು ವಿಸ್ತರಿಸಲಾಗುತ್ತಿದೆ.
ಈ ಸಾಲಿನ ಬಜೆಟ್‌ನಲ್ಲೇ ರಾಜ್ಯದಲ್ಲಿ 5 ಸಾವಿರ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎರಡನೇ ಹಂತದಲ್ಲಿ 4,056 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳಾದ ಎಲ್.ಕೆ.ಜಿ, ಯು.ಕೆ.ಜಿ ಆರಂಭಕ್ಕೆ ಸಜ್ಜಾಗಿದೆ.
ಹೊಸದಾಗಿ ಶುರುವಾಗುವ ಈ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಇರಲಿದೆ. ಜೊತೆಗೆ ಹಾಲು, ಮೊಟ್ಟೆ, ಬಾಳೆಹಣ್ಣು ಸಹ ವಿತರಿಸಲಾಗುವುದು. ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಪ್ರತಿ ಮಗುವಿಗೆ ಕ್ಯಾಲೋರಿ ಶಕ್ತಿ, ಪ್ರೊಟೀನ್ ಭರಿತ ಆಹಾರ ನೀಡಲಾಗುವುದು. ಅಲ್ಲದೆ ವಾರದ ಐದು ದಿನವೂ ಹಾಲು ಮತ್ತು 6 ದಿನ ಮೊಟ್ಟೆ, ಬಾಳೆಹಣ್ಣು ಸಿಗಲಿದೆ.












Click it and Unblock the Notifications