ಮುಗಿದ ಮೊದಲ ಹಂತದ ಜಿಪಂ, ತಾಪಂ ಚುನಾವಣೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 13 : ಮೊದಲ ಹಂತದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾನ ಮುಗಿದಿದೆ. ಕರ್ನಾಟಕ ಸರ್ಕಾರ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯ ತನಕ ಮತದಾನ ನಡೆಯಿತು. ಇದೇ ಮೊದಲ ಬಾರಿಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ನೋಟಾ ಮತದಾನ ಮಾಡಲು ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಅವಕಾಶ ಕಲ್ಪಿಸಲಾಗಿತ್ತು. [ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ವಿವರಗಳು]

zilla panchayat

ಮೊದಲ ಹಂತದಲ್ಲಿ 15 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. 552 ಕ್ಷೇತ್ರಗಳಿಗೆ ನಡೆದ ಚುನಾವಣೆ 2087 ಅಭ್ಯರ್ಥಿಗಳು ಹಣೆಬರಹ ನಿರ್ಧಾರವಾಗಿದೆ. 1,945 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ, 6288 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ.

karnatalka

ಸಂಜೆ, 4.30: ಉತ್ತರ ಕನ್ನಡ ಜಿಲ್ಲೆ ಹಲಗೇರಿ ತಾಪಂ ಕ್ಷೇತ್ರದ ಮತಯಂತ್ರದಲ್ಲಿ ಅಭ್ಯರ್ಥಿಗಳ ಹೆಸರು ಅದಲು ಬದಲು. ಫೆಬ್ರವರಿ 15 ರಂದು ಮರುಮತದಾನ ಮಾಡಲು ಆದೇಶ, ಸ್ಥಳಕ್ಕೆ ಚುನಾವಣಾಧಿಕಾರಿಗಳ ಭೇಟಿ. ಮನೆಮನೆ, ಹಲಗೇರಿ, ಹೆಗಡೆ ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಆದೇಶ.

ಮಧ್ಯಾಹ್ನ, 2.30: ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿ ವಿನಯ ಕುಲಕರ್ಣಿ ವಿರುದ್ಧ ಪ್ರತಿಭಟನ ನಡೆಸುತ್ತಿದ್ದ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಸಮಯ, 11.45: ಧಾರವಾಡ ಜಿಲ್ಲೆ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಯೋಗೇಶಗೌಡ ಗೌಡರ ಬಂಧನಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ವಿನಯ ಕುಲಕರ್ಣಿ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಶನಿವಾರ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ಸಮಯ, 11.00: ಬೆಳಗಾವಿ ಜಿಲ್ಲೆ ಖಾನಾಪುರದ ಐಬಿಯಲ್ಲಿ ಚುನಾವಣೆ ಕಾರ್ಯಕ್ಕೆ ನಿಯುಕ್ತ ಗೊಂಡಿದ್ದ ಅಧಿಕಾರಿಗಳು ಮದ್ಯಗೋಷ್ಠಿ ಮಾಡಿದ ಬಗ್ಗೆ ಮಾಹಿತಿ

ಸಮಯ 10.30: ಧಾರವಾಢ ಜಿಲ್ಲೆ ಕಲಘಟಗಿಯ ಮಿಶ್ರಕೋಟಿ ಗ್ರಾಮದ ನೀರಿನ ಟ್ಯಾಂಕ್ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಚಾರ. ಮಾಧ್ಯಮದವರು ಮತ್ತು ಅಧಿಕಾರಿಗಳನ್ನು ಕಂಡು ಕಾಲುಕಿತ್ತ ಕಾರ್ಯಕರ್ತರು.

ಸಮಯ 10.15 : ಧಾರವಾಡ ಜಿಲ್ಲೆ ಅರೆಕುರಹಟ್ಟಿ ಜನರಿಂದ ಮತದಾನ ಬಹಿಷ್ಕಾರ, ಅಧಿಕಾರಿಗಳಿಂದ ಮನವೊಲಿಕೆ ಯತ್ನ

ಸಮಯ 9.15 : ತುಮಕೂರಿನಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಮಠದ ಆವರಣದಲ್ಲಿರುವ ಶಾಲೆಯಲ್ಲಿ ಮತದಾನ ಮಾಡಿದರು.

ಸಮಯ 8.50 : ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುರಗುಂಟಾ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಜಯಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಸಮಯ 8.40 : 1,945 ತಾಲೂಕು ಪಂಚಾಯಿತಿ ಕ್ಷೇತ್ರಗಳ ಪೈಕಿ 11 ಕಡೆ ಅವಿರೋಧ ಆಯ್ಕೆ ನಡೆದಿದೆ. 1,934 ಕ್ಷೇತ್ರಗಳಿಗೆ ಮತದಾನ ಪ್ರಗತಿಯಲ್ಲಿದೆ

ಸಮಯ 8.30 : 15 ಜಿಲ್ಲೆಗಳ 552 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಎರಡು ಕಡೆ ಅವಿರೋಧ ಆಯ್ಕೆ ನಡೆದಿದೆ. ಆದ್ದರಿಂದ 550 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಸಮಯ 8 ಗಂಟೆ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಂಚಿನಕೇರಿಯಲ್ಲಿ ಮತಯಂತ್ರದಲ್ಲಿ ದೋಷ, ಅರ್ಧ ಗಂಟೆ ವಿಳಂಬವಾಗಿ ಮತದಾನ ಆರಂಭ

ಸಮಯ 7.30 : ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
First phase of the Taluk and Zilla panchayat elections that began amid tight security. On Saturday, February 13, 2016 Polling, began at 7.00 am in 15 districts of Karnataka.
Please Wait while comments are loading...