ಮಾರ್ಚ್ 4ಕ್ಕೆ ಬಸವಕಲ್ಯಾಣದಲ್ಲಿ ಲಿಂಗಾಯತ ಮಹಾ ಅಧಿವೇಶನ
ಜಾಗತಿಕ ಲಿಂಗಾಯತ ಮಹಾಸಭಾ ಮಾ. 4ರ ಬೆಳಗ್ಗೆ 11ಕ್ಕೆ ಉದ್ಘಾಟನೆ ನಡೆಯಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಬಾಗಲಕೋಟೆ, ಮಾರ್ಚ್ 1: ಜಾಗತಿಕ ಲಿಂಗಾಯತ ಮಹಾಸಭಾವು ಮಾರ್ಚ್ 4 ರಿಂದ ಬಸವಕಲ್ಯಾಣದ ರಥ ಮೈದಾನದಲ್ಲಿ ಮೊದಲ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನವನ್ನು ಆಯೋಜಿಸಲಿದ್ದು, ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.
ಮಾ. 4ರ ಬೆಳಗ್ಗೆ 11ಕ್ಕೆ ಉದ್ಘಾಟನೆ ನಡೆಯಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ಗೋ.ರು ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹಾಗೂ ಸುಮಾರು 40 ಮಠಾಧೀಶರು ಭಾಗವಹಿಸಲಿದ್ದಾರೆ.

ಅಧಿವೇಶನದಲ್ಲಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಮಾದಾರ ಪ್ರಾಸ್ತಾವಿಕವಾಗಿ ಮಾತನಾಡುವರು. ವೀರಣ್ಣ ರಾಜೂರು ಮತ್ತು ಮುಕ್ತಾ ಕಾಗಲ್ ಸಂಪಾದಿಸಿರುವ ಜಗದಗಲ ಸ್ಮರಣಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ಲಿಂಗಾಯತ ಸಮುದಾಯದ ವಿವಿಧ ಉಪಪಂಗಡಗಳನ್ನು ಒಗ್ಗೂಡಿಸುವ ಕುರಿತು ಮೊದಲ ಅಧಿವೇಶನ ನಡೆಯಲಿದೆ.
ಎರಡನೇ ಅಧಿವೇಶನದಲ್ಲಿ ಸಂಜೆ 4.45ಕ್ಕೆ ಜಮಾದಾರ್ ಅವರು 'ಮೀಸಲಾತಿ ಮತ್ತು ಲಿಂಗಾಯತರು' 'ಲಿಂಗಾಯತರ ಸ್ವತಂತ್ರ ಧರ್ಮ ಹೋರಾಟ' ಮತ್ತು 'ಜನಗಣತಿ ಮತ್ತು ಲಿಂಗಾಯತರು' ಕುರಿತು ಉಪನ್ಯಾಸ ನೀಡಲಿದ್ದಾರೆ. ಈ ವಿಷಯಗಳ ಕುರಿತು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಕೆಂಪೇಗೌಡ, ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್, ಬಸವರಾಜ ರೊಟ್ಟಿ ವಿಚಾರ ಮಂಡಿಸುವರು. ಅನುಭವ ಮಂಟಪ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ನೂತನ ಅನುಭವ ಮಂಟಪದ ಪ್ರತಿಕೃತಿ ನಿರ್ಮಿಸಿ ಮಾತನಾಡುವರು.
ಮಾರ್ಚ್ 5ರಂದು ಎರಡು ಅಧಿವೇಶನಗಳು ನಡೆಯಲಿವೆ. ಅಂದು ಮಧ್ಯಾಹ್ನ 3 ಗಂಟೆಗೆ ಅಧಿವೇಶನದ ಸಮಾರೋಪ ನಡೆಯಲಿದೆ. ಗದಗನ ತೋಂಟದ ಸಿದ್ದರಾಮ ಸ್ವಾಮಿಗಳು ಸಮಾರೋಪ ಭಾಷಣ ಮಾಡುವರು.












Click it and Unblock the Notifications