Dk Shivakumar: ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿದು, ಬಡಿದು, ಅವರೇ ನುಂಗಿಕೊಳ್ಳಲಿ: ಡಿ ಕೆ ಶಿವಕುಮಾರ್
ಬೆಂಗಳೂರು, ಮೇ 14: ಪೆನ್ ಡ್ರೈವ್ ವಿಚಾರದಲ್ಲಿ ಕುಮಾರಣ್ಣ ಯಾವ ತಿಮಿಂಗಿಲವನ್ನಾದರೂ ಹಿಡಿಯಲಿ, ಹಿಡಿದು, ಬಡಿದು ಅವರೇ ನುಂಗಿಕೊಳ್ಳಲಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧ ಟೀಕೆ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಶಿವಕುಮಾರ್ ಅವರು ಮಾತನಾಡಿ, ಅವರಿಗೆ ಯಾರನ್ನು ಹಿಡಿದು ಬಡಿದು ಒಳಗೆ ಹಾಕಬೇಕು ಅನ್ನಿಸುತ್ತದೋ ಅವರನ್ನು ಒಳಗೆ ಹಾಕಿಸಲಿ. ತಿಮಿಂಗಿಲಗಳನ್ನು ಅವರೇ ನುಂಗಿಕೊಳ್ಳಲಿ. ನಾನು ನಿರ್ದೇಶಕನೂ ಅಲ್ಲ, ನಿರ್ಮಾಪಕನೂ ಅಲ್ಲ. ನಾನು ಕೇವಲ ಪ್ರದರ್ಶಕ ಅಷ್ಟೇ ಎಂದು ಹೇಳಿದರು.

ಶಾಸಕರು, ಸಚಿವರಿಂದ ಮಾತನಾಡಿಸುತ್ತಿರುವವರು ಯಾರು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಹೇಳಿದ್ದಾರೆ ಎಂದಾಗ, ಬೇರೆಯವರಿಂದ ಮಾತನಾಡಿಸುವ, ಪ್ರತಿಭಟನೆ ಮಾಡಿಸುವ, ಬೇರೆಯವರ ಮೇಲೆ ಅನಗತ್ಯ ಆರೋಪ ಮಾಡುವ ಅಗತ್ಯ ನನಗಿಲ್ಲ. ನಾನು ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ಧೇನೆ. ನಾನು ರಾಜಕೀಯ ಪಕ್ಷದ ಅಧ್ಯಕ್ಷ. ಈ ಪ್ರಕರಣದಲ್ಲಿ ಒಂದು ಸಣ್ಣ ಹಸ್ತಕ್ಷೇಪವಿದ್ದರೂ ಅದಕ್ಕೆ ಬೆಲೆ ತೆರಲು ನಾನು ಸಿದ್ಧ. ಈಗ ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.
ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ರೇವಣ್ಣ ಅವರನ್ನು ಬಂಧಿಸಲಾಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿ, "ರೇವಣ್ಣ ಅವರ ಪರಿಸ್ಥಿತಿ ನೋಡಿ ನನಗೂ ಬೇಸರವಾಗುತ್ತಿದೆ. ಅವರದು ದೊಡ್ಡ ಕುಟುಂಬ, ಈ ರೀತಿ ಆಗಬಾರದು ಎಂದು ಬಯಸುತ್ತೇನೆ. ಅವರು ನನಗೆ ಏನಾದಲೂ ಬಯಸಲಿ. ಆದರೆ ನಾನು ಮಾತ್ರ ಅವರಿಗೆ ಕೆಟ್ಟದ್ದು ಬಯಸುವುದಿಲ್ಲ. ನಾನು ಪ್ರಕೃತಿ ನಿಯಮ, ನ್ಯಾಯದ ಮೇಲೆ ನಂಬಿಕೆ ಇಟ್ಟವನು.
ನಾನು ರಾಜಕೀಯ ಷಡ್ಯಂತ್ರಕ್ಕೆ ಗುರಿ ಆಗಿದ್ದವನೇ ಮತ್ತು ಅದರ ನೋವು ಅನುಭವಿಸಿದವನೇ. ಆ ವೇಳೆಯಲ್ಲಿ ನಾನು ಎಷ್ಟು ಗಟ್ಟಿಯಾಗಿ, ಧೈರ್ಯವಾಗಿ, ಆತ್ಮವಿಶ್ವಾಸದಿಂದ ಇದ್ದೆ ಎಂಬುದು ನನಗೆ ಮಾತ್ರ ಗೊತ್ತಿದೆ. ದೇವರು ನನಗೆ ಎಲ್ಲಾ ರೀತಿಯ ರಕ್ಷಣೆ ನೀಡಿದ್ದು, ನಾನು ಬೇರೆಯವರಿಗೆ ಕೆಟ್ಟದು ಬಯಸುವುದಿಲ್ಲ. ಆದರೆ ನನ್ನ ಬ್ರದರ್ ಕುಮಾರಣ್ಣನಿಗೆ ವಿಧಾನಸಭೆಯಲ್ಲಿ ಉತ್ತರ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.












Click it and Unblock the Notifications