ಜನರ ಸಮಸ್ಯೆಗಳ ಬಗ್ಗೆ ಹೋರಾಡಿ ಒಂದೇ ಒಂದು ಚುನಾವಣೆಯಲ್ಲಿ ಬಿಜೆಪಿ ಗೆದ್ದು ತೋರಿಸಲಿ: ಮಂಡ್ಯದಲ್ಲಿ ಪ್ರಿಯಾಂಕಾ ಗಾಂಧಿ ಸವಾಲು
ಮಂಡ್ಯ, ಮೇ 02: ಕರ್ನಾಟಕದಲ್ಲಿ ಜನರು ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲು ಪ್ರಧಾನಿ ನರೇಂದ್ರ ಮೋದಿ, ಅವರ ಸಚಿವರು ಮತ್ತು ಬಿಜೆಪಿ ಸರ್ಕಾರಕ್ಕೆ ದೈರ್ಯವಿಲ್ಲ. ಜನರ ಸಮಸ್ಯೆಗಳ ಮೇಲೆ ಒಂದೇ ಒಂದು ಚುನಾವಣೆಯನ್ನು ಬಿಜೆಪಿ ಗೆದ್ದು ತೋರಿಸಲಿ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸವಾಲು ಹಾಕಿದರು.
ಮಂಡ್ಯದಲ್ಲಿ ಮಂಗಳವಾರ ನಡೆದ ಬೃಹತ್ ಸಮಾವೇಶ ಉದ್ದೇಶಿಸಿ ಪ್ರಿಯಾಂಕಾ ಗಾಂಧಿ ಮಾತನಾಡಿದರು. 'ಬದಲಾವಣೆಗಾಗಿ ಮತ ಚಲಾಯಿಸಿ' ಮತ್ತು 'ಪ್ರಗತಿ ಮತ್ತು ಸಮೃದ್ಧಿಗಾಗಿ ಮತ ಚಲಾಯಿಸಿ' ಎಂದು ಅವರು ಜನರಿಗೆ ಕರೆ ನೀಡಿದರು.

ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮ ತಡವಾಯಿತು. ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಇದ್ದ ಕಾರಣ ರಸ್ತೆ ಮಾರ್ಗವಾಗಿ ಪ್ರಯಾಣಿಸಲು ವಿಳಂಬವಾಗಿದ್ದಕ್ಕೆ ನೆರೆದಿದ್ದ ಜನರಲ್ಲಿ ಕ್ಷಮೆ ಯಾಚಿಸಿದರು.
ಕರ್ನಾಟಕವು ತನ್ನ ಸಂಸ್ಕೃತಿ, ಸಂಪ್ರದಾಯ ಮತ್ತು ಬಸವಣ್ಣನವರಂತಹ ಮಹಾನ್ ವ್ಯಕ್ತಿಗಳಿಂದ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ರಾಜ್ಯವು ನೈಸರ್ಗಿಕ ಸಂಪನ್ಮೂಲಗಳು, ವಿದ್ಯಾವಂತರು ಮತ್ತು ಶ್ರಮಜೀವಿಗಳಿಂದ ಆಶೀರ್ವದಿಸಲ್ಪಟ್ಟಿದ್ದರೂ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಭ್ರಷ್ಟ ಆಡಳಿತದಿಂದ ನಿರುದ್ಯೋಗ, ಬೆಲೆ ಏರಿಕೆ ಸಾರ್ವಜನಿಕರನ್ನು ಕಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯದ್ದು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪಿಸಿದ ಪ್ರಿಯಾಂಕಾ, ಕಳೆದ ಮೂರು ವರ್ಷಗಳಿಂದ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಸರ್ಕಾರವನ್ನು ಕೆಳಗಿಳಿಸಿ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿತು ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ವಿವಿಧ ಹಗರಣಗಳನ್ನು ಎತ್ತಿ ತೋರಿಸಿದ ಪ್ರಿಯಾಂಕಾ ಅವರು ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಿದರು.
ಚುನಾವಣೆಗೆ ಮತ ಹಾಕುವ ಮುನ್ನ ತಮ್ಮ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಅವರು ಜನರಿಗೆ ಕರೆ ನೀಡಿದರು.
ಬಿಜೆಪಿ ನಾಯಕರಿಗೆ ಜನರನ್ನು ಎದುರಿಸಿ ಅಭಿವೃದ್ಧಿ ಬಗ್ಗೆ ಮಾತನಾಡುವ ವಿಶ್ವಾಸವಿಲ್ಲ ಎಂದೂ ಪ್ರಿಯಾಂಕಾ ಆರೋಪಿಸಿದರು.
ಬದಲಾವಣೆ ಆರಂಭವಾಗಿದ್ದು, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲ್ಲುವ ಮೂಲಕ ರಾಜ್ಯದ ಜನತೆ ಬದಲಾವಣೆ ತರಲಿದ್ದಾರೆ ಎಂದು ಪ್ರಿಯಾಂಕಾ ಹೇಳಿದರು.
'ಕಾಂಗ್ರೆಸ್, ಬಿಜೆಪಿ ಅಥವಾ ಇತರರನ್ನು ಲೆಕ್ಕಿಸದೆ ನಾಯಕರಿಂದ ಉತ್ತರವನ್ನು ಕೇಳುವುದು ನಿಮ್ಮ ಜವಾಬ್ದಾರಿಯಾಗಿದೆ. ಬಿಜೆಪಿ ಸರ್ಕಾರ ಜನರಿಗೆ ಏನೂ ಮಾಡಿಲ್ಲ. ಉಜ್ವಲ ಭವಿಷ್ಯಕ್ಕಾಗಿ ಸರ್ಕಾರವನ್ನು ತೆಗೆದುಹಾಕಿ ಮತ್ತು ಕಾಂಗ್ರೆಸ್‌ಗೆ ಮತ ನೀಡಿ' ಎಂದು ಪ್ರಿಯಾಂಕಾ ತಿಳಿಸಿದರು.












Click it and Unblock the Notifications