HSRP: ಹೊಸ ನಂಬರ್ ಪ್ಲೇಟ್ ಅಳವಡಿಕೆಗೆ 45 ದಿನ ಮಾತ್ರ ಬಾಕಿ
ರಾಜ್ಯ ಸಾರಿಗೆ ಇಲಾಖೆಯು 2019ರ ಏಪ್ರಿಲ್ 1ರ ಮೊದಲು ನೋಂದಣಿಯಾಗಿರುವ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಇದಕ್ಕೆ ಜನ ಹೆಚ್ಚಿನ ಆಸಕ್ತಿ ತೋರಿಲ್ಲ ಎನ್ನುವುದು ಸ್ಪಷ್ಟವಾಗಿದ್ದು, ಶೇಕಡ 1 ರಷ್ಟು ವಾಹನ ಮಾಲೀಕರು ಅಂದರೆ ಈವರೆಗೆ 30 ಸಾವಿರ ವಾಹನ ಮಾಲೀಕರು ಮಾತ್ರ ನಂಬರ್ ಪ್ಲೇಟ್‌ಗಳನ್ನು ಬದಲಾವಣೆ ಮಾಡಿಕೊಂಡಿದ್ದಾರೆ.
ಆಗಸ್ಟ್ 17 ರಂದು, ರಾಜ್ಯ ಸರ್ಕಾರವು ಮೂಲ ಉಪಕರಣ ತಯಾರಕರ (OEM) ಅಧಿಕೃತ ಡೀಲರ್‌ಗಳಿಂದ ಪ್ರತ್ಯೇಕವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸುವ ಅಧಿಸೂಚನೆಯನ್ನು ಹೊರಡಿಸಿತು ನವೆಂಬರ್ 17 ಹೊಸ ರೀತಿಯ ನಂಬರ್ ಪ್ಲೇಟ್ ಪಡೆಯಲು ಕೊನೆಯ ದಿನಾಂಕವಾಗಿದೆ.

ನವೆಂಬರ್ 17ರ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ಆದರೂ ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲದೇ ಇರುವುದು, ಸರ್ಕಾರ ಕೂಡ ಈ ಬಗ್ಗೆ ಹೆಚ್ಚಾಗಿ ಪ್ರಚಾರ ಮಾಡದೇ ಇರುವುದರಿಂದ ಹೆಚ್ಚಿನ ವಾಹನ ಮಾಲೀಕರು ನಂಬರ್ ಪ್ಲೇಟ್ ಬದಲಾಯಿಸಲು ಮನಸ್ಸು ಮಾಡಿಲ್ಲ ಎನ್ನಲಾಗಿದೆ.
2 ಕೋಟಿ ವಾಹನಗಳ ನಂಬರ್ ಪ್ಲೇಟ್ ಬದಲಾವಣೆ
ರಾಜ್ಯಾದ್ಯಂತ ಸುಮಾರು ಎರಡು ಕೋಟಿ ವಾಹನ ಮಾಲೀಕರು ಹೊಸ ನಂಬರ್ ಪ್ಲೇಟ್‌ಗಳನ್ನು ಪಡೆಯಲು ಸುಮಾರು 45 ದಿನಗಳು ಉಳಿದಿವೆ ಅಷ್ಟರೊಳಗೆ ಎಲ್ಲಾ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು ಎಂದರೆ ಪ್ರತಿ ದಿನ 4 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಾಯಿಸಿಕೊಳ್ಳಬೇಕು.
ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯವಾಗಿದೆ. ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ತಡೆ ನೀಡುವಂತೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತಾದರೂ, ಹೈಕೋರ್ಟ್ ಅದನ್ನು ವಜಾಗೊಳಿಸಿದೆ. ಆದರೂ, ನವೆಂಬರ್ 17ರ ಬಳಿಕ ದಿನಾಂಕವನ್ನು ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಹೊಸ ರೀತಿಯ ನಂಬರ್ ಪ್ಲೇಟ್ ಪಡೆಯುವುದು ಹೇಗೆ?
1) ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು 'Book HSRP' ಕ್ಲಿಕ್ ಮಾಡಿ.
2) ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ ಮತ್ತು ನಿಮ್ಮ ವಾಹನದ ವಿವರವನ್ನು ಭರ್ತಿ ಮಾಡಿ.
3) ಎಚ್‌ಎಸ್‌ಆರ್‌ಪಿ ಜೋಡಣೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ ಮತ್ತು ಆನ್‌ಲೈನ್‌ನಲ್ಲಿ ಎಚ್‌ಎಸ್‌ಆರ್‌ಪಿ ಶುಲ್ಕವನ್ನು ಪಾವತಿಸಲು ಮುಂದುವರಿಯಿರಿ. (ಸೂಚನೆ: ಯಾವುದೇ ಪಾವತಿಯನ್ನು ನಗದು ರೂಪದಲ್ಲಿ ಸ್ವೀಕರಿಸಲ್ಲ, ಕೇವಲ ಆನ್‌ಲೈನ್ ಮೂಲಕ ಮಾತ್ರ ಪಾವತಿ ಮಾಡಬಹುದಾಗಿದೆ.)
4) ವಾಹನ ಮಾಲೀಕರ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ. ಮಾಲೀಕರು ಅವರ ಅನುಕೂಲಕ್ಕೆ ಮತ್ತು ವೆಬ್‌ಸೈಟ್‌ಗೆ ಅನುಗುಣವಾಗಿ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು.
5) ಮಾಲೀಕರು ನಂತರ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್ ಪಿ ಅಳವಡಿಸಲು ವಾಹನ ತಯಾರಕರು ಅಥವಾ ಡೀಲರ್ ಬಳಿ ಭೇಟಿ ನೀಡಬೇಕು.












Click it and Unblock the Notifications