ಪರಿಷತ್ ಚುನಾವಣೆ ಅಧಿಸೂಚನೆ ಪ್ರಕಟ; 3 ಸ್ಥಾನಗಳು ಕಾಂಗ್ರೆಸ್ ಪಾಲು?
ಬೆಂಗಳೂರು, ಜೂನ್ 13; ಕರ್ನಾಟಕ ವಿಧಾನ ಪರಿಷತ್ ಉಪ ಚುನಾವಣೆಗೆ ಅಧದಿಸೂಚನೆ ಪ್ರಕಟವಾಗಿದೆ. ವಿಧಾನಸಭೆಯಿಂದ ಪರಿಷತ್‌ಗೆ ಮೂವರು ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಮಂಗಳವಾರ ಆರಂಭವಾಗಲಿದೆ. ಚುನಾವಣೆ ಜೂನ್ 30ರಂದು ನಡೆಯಲಿದೆ.
ಮಂಗಳವಾರದಿಂದ ಜೂನ್ 20ರ ತನಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಬಹುದು. ಜೂನ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 23 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 30ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ.

ಚುನಾವಣಾ ವೇಳಾಪಟ್ಟಿ ಪ್ರಕಾರ ಮತದಾನ ಮುಗಿದ ಬಳಿಕ ಜೂನ್ 30ರ ಸಂಜೆ 5 ಗಂಟೆಯ ಬಳಿಕ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಇದ್ದು, ಚುನಾವಣೆ ನಡೆಯುವುದು ಅನುಮಾನವಾಗಿದೆ.
ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗಿದ್ದ ಲಕ್ಷ್ಮಣ ಸವದಿ, ಬಾಬೂರಾವ್ ಚಿಂಚನಸೂರು, ಆರ್. ಶಂಕರ್ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಉಪ ಚುನಾವಣೆ ಎದುರಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ 135 ಸ್ಥಾನಗಳಲ್ಲಿ ಗೆದ್ದು ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಆದ್ದರಿಂದ ವಿಧಾನಸಭೆಯಲ್ಲಿ ಪಕ್ಷ ಸ್ಪಷ್ಟ ಬಹುಮತ ಹೊಂದಿದ್ದು ಮೂರು ಸ್ಥಾನಗಳಲ್ಲಿಯೂ ಸುಲಭವಾಗಿ ಗೆಲುವು ಸಾಧಿಸಲಿದೆ. ಆದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇಲ್ಲ.
ಆದ್ದರಿಂದ ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿಯಾದರೂ ಆಯ್ಕೆಯಾಗುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷ ಒಂದು ಸ್ಥಾನಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್. ಎಸ್. ಬೋಸರಾಜು ಅಭ್ಯರ್ಥಿಯನ್ನಾಗಿ ಮಾಡಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಎನ್. ಎಸ್. ಬೋಸರಾಜು ಸೇರಿಸಿಕೊಳ್ಳಲಾಗಿದೆ. ಆದರೆ ಶಾಸಕರು, ವಿಧಾನ ಪರಿಷತ್ ಸದಸ್ಯರೂ ಅಲ್ಲದ ಅವರು ಆರು ತಿಂಗಳಿನಲ್ಲಿ ಮೇಲ್ಮನೆ ಅಥವ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಬೇಕು. ಆದ್ದರಿಂದ ಒಂದು ಸ್ಥಾನಕ್ಕೆ ಅವರು ಅಭ್ಯರ್ಥಿ ಆಗುವುದು ಖಚಿತ.
ಇನ್ನೂ ಎರಡು ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದೆ. ಚುನಾವಣೆ ಸಮಯದಲ್ಲಿ ಟಿಕೆಟ್ ಕೇಳಿದ ನಾಯಕರಿಗೆ ಪರಿಷತ್ ಸ್ಥಾನ ನೀಡುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ. ಆದ್ದರಿಂದ ಯಾರು ಅಭ್ಯರ್ಥಿ? ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಉಪ ಚುನಾವಣೆ; ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬೂರಾವ್ ಚಿಂಚನಸೂರು ಅವಧಿ 2024ರ ಜೂನ್ 17ರ ತನಕ ಇತ್ತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಕಣಕ್ಕಿಳಿಯಲು ಅವರು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಪಕ್ಷ ಟಿಕೆಟ್ ಸಹ ನೀಡಿತ್ತು. ಚುನಾವಣೆಯಲ್ಲಿ ಅವರು 69718 ಮತಗಳನ್ನು ಪಡೆದು, ಜೆಡಿಎಸ್‌ನ ಶರಣ ಗೌಡ ಕುಂದನೂರ ವಿರುದ್ಧ ಸೋಲು ಕಂಡರು.
ಆರ್. ಶಂಕರ್ ಪರಿಷತ್ ಅವಧಿಯೂ 2026ರ ಜೂನ್ 30ರ ತನಕ ಇತ್ತು. ರಾಣೆಬೆನ್ನೂರು ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಎನ್‌ಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, 37559 ಮತಗಳನ್ನು ಪಡೆದು ಸೋಲು ಕಂಡರು. ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ಕುಸಿದರು.
ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗಿದ್ದ ಲಕ್ಷ್ಮಣ ಸವದಿ ಅವಧಿ ಸಹ 2028ರ ಜೂನ್ 14ರ ತನಕ ಇತ್ತು. ಬಿಜೆಪಿ ತೊರೆದ ಅವರು ಅಥಣಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 131404 ಮತಗಳನ್ನು ಪಡೆದು ಅವರು ಗೆಲುವು ಸಾಧಿಸಿದ್ದಾರೆ.












Click it and Unblock the Notifications