ಮೈಸೂರು ದಸರಾ: ಜಂಬೂಸವಾರಿಯಲ್ಲಿ ಕೊನೆಯ ಬಾರಿಗೆ ಹೆಜ್ಜೆ ಹಾಕಿದ ಕ್ಯಾಪ್ಟನ್ ಅಭಿಮನ್ಯುವಿಗೆ ಭಾವುಕ ವಿದಾಯ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ದಸರಾ ಮಹೋತ್ಸವದ ಜಂಬೂಸವಾರಿ ಎಂದರೆ ಕೇವಲ ಅರಮನೆ, ಚಿನ್ನದ ಅಂಬಾರಿ ಮಾತ್ರವಲ್ಲ, ಅಲ್ಲಿ ಹೆಜ್ಜೆ ಹಾಕುವ ಗಜಪಡೆ ಕೂಡ ಪ್ರಮುಖ ಆಕರ್ಷಣೆ ಎಂದರೆ ತಪ್ಪಿಲ್ಲ. ಕಳೆದ 26 ವರ್ಷಗಳಿಂದ ಮೈಸೂರು ದಸರಾದ ಅವಿಭಾಜ್ಯ ಅಂಗವಾಗಿದ್ದ, ದಸರಾ ಗಜಪಡೆಯ ಕ್ಯಾಪ್ಟನ್, ಕರುನಾಡಿನ ನೆಚ್ಚಿನ ಆನೆ ಅಭಿಮನ್ಯು ಬುಧವಾರದಂದು ತನ್ನ ಕೊನೆಯ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಇತಿಹಾಸದ ಪುಟ ಸೇರಿದ್ದಾನೆ.

ಸಾರ್ವಜನಿಕರ ಒತ್ತಾಯದ ಮೇರೆಗೆ ನಿಶಾನೆ ಆನೆಯಾಗಿ ಭಾಗಿ

60 ವರ್ಷ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಅಭಿಮನ್ಯುವಿಗೆ ದಸರಾ ಜವಾಬ್ದಾರಿಯಿಂದ ವಿಶ್ರಾಂತಿ ನೀಡಲು ಅರಣ್ಯ ಇಲಾಖೆ ನಿರ್ಧರಿಸಿತ್ತು. ಆಗಸ್ಟ್ ತಿಂಗಳಲ್ಲಿ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಈತನಿಗೆ ಅದ್ಧೂರಿ ಬೀಳ್ಕೊಡುಗೆಯನ್ನೂ ನೀಡಲಾಗಿತ್ತು.

Legendary Elephant Abhimanyu Makes His Historic Final Appearance at Mysuru Dasara 2026 Procession

ಆದರೆ, ಅಭಿಮನ್ಯು ಇಲ್ಲದ ದಸರಾವನ್ನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮೈಸೂರಿನ ಜನತೆ ಮತ್ತು ವಿವಿಧ ಸಂಘಟನೆಗಳು ತೀವ್ರ ಬೇಡಿಕೆ ಇಟ್ಟಿದ್ದವು. ಸಾರ್ವಜನಿಕರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ, ಈ ಬಾರಿಯ ಜಂಬೂಸವಾರಿಯಲ್ಲಿ ಅಭಿಮನ್ಯುವಿಗೆ ನಿಶಾನೆ ಆನೆಯಾಗಿ ಮುನ್ನಡೆಯಲು ವಿಶೇಷ ಅವಕಾಶ ಕಲ್ಪಿಸಿಕೊಟ್ಟಿತು. ಅರಮನೆ ಆವರಣಕ್ಕೆ ಆತ ಆಗಮಿಸುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಅಭಿಮಾನಿಗಳು ಜಯಘೋಷ ಮೊಳಗಿಸಿ, ತಮ್ಮ ನೆಚ್ಚಿನ ಗಜರಾಜನಿಗೆ ಪ್ರೀತಿಯಿಂದ ವಿದಾಯ ಹೇಳಿದರು.

2020 ರಿಂದ 2025ರವರೆಗೆ ಚಿನ್ನದ ಅಂಬಾರಿ ಹೊತ್ತ ಗಜರಾಜ

ಅಭಿಮನ್ಯು ಮೈಸೂರು ದಸರಾದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾನೆ. 2020 ರಿಂದ 2025ರವರೆಗೆ ಸತತ ಆರು ವರ್ಷಗಳ ಕಾಲ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನ ಅತ್ಯಂತ ಗಾಂಭೀರ್ಯದಿಂದ ಹೊತ್ತು ಸಾಗಿದ್ದ ಈ ಗಜರಾಜ, ನಾಡಿನ ಜನರ ಕಣ್ಮಣಿಯಾಗಿದ್ದ.

ಆತನ ಗಾಂಭೀರ್ಯದ ನಡಿಗೆ, ಎಂತಹ ಗದ್ದಲದ ನಡುವೆಯೂ ಶಾಂತವಾಗಿರುತ್ತಿದ್ದ ಸ್ವಭಾವ ಹಾಗೂ ಅಂಬಾರಿ ಹೊರುವ ಅದ್ಭುತ ಸಾಮರ್ಥ್ಯ ಮೈಸೂರಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುವಂತೆ ಮಾಡಿತ್ತು. ಇದೀಗ 60 ವರ್ಷ ಪೂರೈಸಿರುವ ಕಾರಣ, ಆತನ ಆರೋಗ್ಯದ ಹಿತದೃಷ್ಟಿಯಿಂದ ಅಂಬಾರಿ ಹೊರುವ ಜವಾಬ್ದಾರಿಯಿಂದ ಮುಕ್ತಗೊಳಿಸಿ ಗೌರವಯುತವಾದ ವಿದಾಯ ನೀಡಲಾಗಿದೆ.

ಕಾಡು ಪ್ರಾಣಿಗಳ ಸೆರೆ ಹಾಗೂ ಕಾರ್ಯಾಚರಣೆಯ ಅಸಲಿ ಹೀರೋ

ದಸರಾ ಮಾತ್ರವಲ್ಲದೆ, ಅರಣ್ಯ ಇಲಾಖೆಯ ಪಾಲಿಗೆ ಅಭಿಮನ್ಯು ಒಬ್ಬ ನಿಜವಾದ ಹೀರೋ ಅಥವಾ ಆಪತ್ಬಾಂಧವ ಎಂದೇ ಹೇಳಬಹುದು. ಏಕೆಂದರೆ, ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸುವ ಕಾರ್ಯಾಚರಣೆಗಳಲ್ಲಿ ಈತನ ಪಾತ್ರ ಮರೆಯಲಾಗದ್ದು.

ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಅಭಿಮನ್ಯು ಇದುವರೆಗೆ ಸುಮಾರು 300ಕ್ಕೂ ಹೆಚ್ಚು ಕಾಡು ಪ್ರಾಣಿಗಳನ್ನ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದಾನೆ. ಈ ಪೈಕಿ 80ಕ್ಕೂ ಹೆಚ್ಚು ನರಭಕ್ಷಕ ಪ್ರಾಣಿಗಳನ್ನ ಸೆರೆಹಿಡಿಯುವಲ್ಲಿ ಈತನ ಶೌರ್ಯ ಅಪಾರ.

ಕಾಡಾನೆಗಳು ನಾಡಿಗೆ ನುಗ್ಗಿದಾಗ, ಅವುಗಳನ್ನ ನಿಯಂತ್ರಿಸಿ ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆಗೆ ಮೊದಲ ಆಯ್ಕೆಯಾಗಿದ್ದೇ ಈ ಬಲಶಾಲಿ ಅಭಿಮನ್ಯು. ದಸರಾದಿಂದ ನಿವೃತ್ತಿಯಾದರೂ, ಕರುನಾಡಿನ ಜನರ ಮನಸ್ಸಿನಲ್ಲಿ ಕ್ಯಾಪ್ಟನ್ ಅಭಿಮನ್ಯುವಿನ ನೆನಪು ಸದಾ ಹಸಿರಾಗಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+