ಕಾನೂನು ವಿವಿ ಪರಿಶೀಲನಾ ಕಾರ್ಯಕ್ಕೆ ಹೈಕೋರ್ಟ್ ನಿರ್ಬಂಧ
ಬೆಂಗಳೂರು, ಜುಲೈ 25; ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳು ನೇಮಿಸಿರುವ ಸ್ಥಳೀಯ ಪರಿಶೀಲನಾ ಸಮಿತಿಯು ರಾಜ್ಯದ ಕಾನೂನು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನಾ ಕಾರ್ಯ ನಡೆಸುವುದಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ ಹೇರಿದೆ.
ಕಾನೂನು ಕಾಲೇಜುಗಳ ಪರಿಶೀಲನೆ ನಡೆಸಲು ಸ್ಥಳೀಯ ಪರಿಶೀಲನಾ ಸಮಿತಿಯನ್ನು ನೇಮಕ ಮಾಡಿ 2023ರ ಜು.11ರಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳು ಹೊರಡಿಸಿರುವ ಆದೇಶ ರದ್ದು ಕೋರಿ ವಿವಿ ಸಿಂಡಿಕೇಟ್ ಸದಸ್ಯ ಬಿ. ಜಿ. ರವಿ ಕುಮಾರ್ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಯಿತು.

ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಅರ್ಜಿ ವಿಚಾರಣೆ ನಡೆಸಿ, ಮಧ್ಯಂತರ ಆದೇಶ ಮಾಡಿದೆ. ಮುಂದಿನ ವಿಚಾರಣೆವರೆಗೆ ಕಾನೂನು ವಿವಿ ಕುಲಪತಿಗಳು ನೇಮಿಸಿರುವ ಸ್ಥಳೀಯ ಪರಿಶೀಲನಾ ಸಮಿತಿ, ಕಾನೂನು ಕಾಲೇಜುಗಳ ಪರಿಶೀಲನೆ ನಡೆಸುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಧ್ಯಂತರ ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.
ಮಧ್ಯಂತರ ಆದೇಶದ ಜೊತೆಗೆ ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದ ಸಹಾಯಕ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ.
ಏಕಪಕ್ಷೀಯ ನಿರ್ಧಾರ; ಹೊಸ ಕಾನೂನು ಕಾಲೇಜುಗಳ ಮಾನ್ಯತೆ ಮಂಜೂರು ಮಾಡಲು ಕೋರಿದ ಅರ್ಜಿ ಮತ್ತು ಮಾನ್ಯತೆ ನವೀಕರಣಕ್ಕೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ, ಸದಸ್ಯರೊಂದಿಗೆ ಚರ್ಚಿಸಿದ ನಂತರ ನಿರ್ಧಾರ ಪಡೆದುಕೊಳ್ಳಬೇಕಿದೆ.
ಆದರೆ, ಕಳೆದ 6 ತಿಂಗಳಿಂದಲೂ ವಿವಿ ಕುಲಪತಿಗಳು ಸಿಂಡಿಕೇಟ್ ಸಭೆ ನಡೆಸಿಲ್ಲ. ಅಲ್ಲದೆ, ಕಾಲೇಜುಗಳ ಪರಿಶೀಲನೆಗೆ ಸ್ಥಳೀಯ ಪರಿಶೀಲನಾ ಸಮಿತಿ ರಚಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಆದ್ದರಿಂದ 2023ರ ಜು.11ರಂದು ಕುಲಪತಿಗಳು ನೇಮಕ ಮಾಡಿರುವ ಸ್ಥಳೀಯ ಪರಿಶೀಲನಾ ಸಮಿತಿ ರದ್ದುಪಡಿಸಬೇಕು. ಅರ್ಜಿಯ ಇತ್ಯರ್ಥವಾಗುವರೆಗೆ ಸಮಿತಿಯ ಕಾರ್ಯ ನಿರ್ವಹಣೆಗೆ ನಿರ್ಬಂಧ ಹೇರಬೇಕು ಎಂದು ಅರ್ಜಿದಾರರು ಕೋರಿದ್ದಾರೆ.












Click it and Unblock the Notifications