ಲಸಿಕೆ ಮೇಳ: ಕರ್ನಾಟಕದಲ್ಲಿ ಒಂದೇ ದಿನ 10 ಲಕ್ಷ ಮಂದಿಗೆ ಚುಚ್ಚುಮದ್ದು!
ಬೆಂಗಳೂರು, ಸಪ್ಟೆಂಬರ್ 2: ಕರ್ನಾಟಕದಲ್ಲಿ ಬುಧವಾರ ನಡೆಸಿದ ಕೊರೊನಾವೈರಸ್ ಲಸಿಕೆ ಅಭಿಯಾನ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ದಿನದ ನಿಗದಿತ ಗುರಿಯ ಶೇ.50ರಷ್ಟು ಪ್ರಮಾಣವನ್ನೂ ತಲುಪಲಾಗದ ಜಿಲ್ಲೆಗಳಲ್ಲೂ ದಾಖಲೆ ಮಟ್ಟಿಗೆ ಲಸಿಕೆ ಅಭಿಯಾನ ಯಶಸ್ವಿಯಾಗಿದೆ. ಗದಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ ಮತ್ತು ಯಾದಗಿರಿ ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ಒಂದೇ ದಿನ 10,08,311 ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ.
2021ರ ವರ್ಷಾಂತ್ಯದ ವೇಳೆಗೆ ದೇಶದಲ್ಲಿ ಶೇ.100ರಷ್ಟು ಅರ್ಹ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಪ್ರತಿ ಬುಧವಾರ ಲಸಿಕೆ ಮೇಳವನ್ನು ನಡೆಸಲಾಗುತ್ತದೆ. ಬುಧವಾರದ ಲಸಿಕೆ ಮೇಳದಲ್ಲಿ 15,19,700 ಮಂದಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದ್ದು, ಈ ಪೈಕಿ 10,08,311 ಜನರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಆ ಮೂಲಕ ಶೇ.66ರಷ್ಟು ಲಸಿಕೆ ಮೇಳವು ಯಶಸ್ವಿಯಾಗಿದೆ.

ಕರ್ನಾಟಕದಲ್ಲಿ ಒಂದೇ ದಿನ 10 ಲಕ್ಷ ಮಂದಿಗೆ ಲಸಿಕೆ
"ಕರ್ನಾಟಕವು ಇಂದೊಂದೇ ದಿನ 10 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಿದೆ. ಕಳೆದ ಐದು ದಿನಗಳಲ್ಲಿ 35 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ," ಎಂದು ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ಲಸಿಕೆ ವಿತರಣೆಯಲ್ಲಿ ಅಗ್ರಸ್ಥಾನದಲ್ಲಿರುವ 7 ಜಿಲ್ಲೆಗಳಲ್ಲಿ ಬುಧವಾರದ ಲಸಿಕೆ ಮೇಳದಲ್ಲಿ ಅತಿಹೆಚ್ಚು ಲಸಿಕೆ ವಿತರಣೆ ಮಾಡಲಾಗಿದೆ. ಬುಧವಾರದ ಲಸಿಕೆ ಮೇಳದಲ್ಲಿ ನಿಗದಿಗೊಳಿಸಿದ ಗುರಿಯ ಪೈಕಿ ಧಾರವಾಡ ಶೇ.118, ಬೆಂಗಳೂರು ನಗರ ಶೇ.108, ಮಂಡ್ಯ ಶೇ.108, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.97, ಚಿಕ್ಕಮಗಳೂರು ಶೇ.84, ಶಿವಮೊಗ್ಗ ಶೇ.81 ಮತ್ತು ಬೀದರ್ ಶೇ.71ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಇನ್ನು ಬೆಳಗಾವಿ, ತುಮಕೂರು, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೇ.60 ರಿಂದ 73, ಕೊಪ್ಪಳ, ಕೊಡಗು, ಉಡುಪಿ, ಚಾಮರಾಜನಗರ, ಕೋಲಾರದಲ್ಲಿ ಶೇ.53 ರಿಂದ 58ರಷ್ಟು ಲಸಿಕೆಯನ್ನು ವಿತರಿಸಲಾಗಿದೆ.
|
ಕೊವಿಡ್-19 ಲಸಿಕೆ ವಿತರಣೆಯಲ್ಲಿ ರಾಜ್ಯದ ಮೈಲಿಗಲ್ಲು
ಕರ್ನಾಟಕವು ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ದೇಶದಲ್ಲಿ ಒಂದು ಕೋಟಿಗೂ ಅಧಿಕ ಲಸಿಕೆಯನ್ನು ವಿತರಿಸಿದ ಆರು ರಾಜ್ಯಗಳ ಪಟ್ಟಿಗೆ ಕರ್ನಾಟಕವೂ ಸೇರ್ಪಡೆಯಾಗಿದೆ. ಈ ಕುರಿತು ವಿಶೇಷ ಅಂಶಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
* ದೇಶದಲ್ಲಿ 1 ಕೋಟಿ ಡೋಸ್ ಲಸಿಕೆ ವಿತರಿಸಿದ 6 ರಾಜ್ಯಗಳ ಪಟ್ಟಿಗೆ ಕರ್ನಾಟಕ
* ದೆಹಲಿಯನ್ನು ಬಿಟ್ಟರೆ 1 ಕೋಟಿ ಡೋಸ್ ಲಸಿಕೆ ನೀಡಿದ 2ನೇ ಮಹಾನಗರ ಬೆಂಗಳೂರು
* ರಾಜ್ಯದಲ್ಲಿ ಶೇ.100ರಷ್ಟು ಮಂದಿಗೆ ಲಸಿಕೆ ನೀಡಿದ ಮೊದಲ ಜಿಲ್ಲೆ ಬೆಂಗಳೂರು ನಗರ
* ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಮಂದಿಗೆ ಲಸಿಕೆ
* ಆಗಸ್ಟ್ 27ರ ಪ್ರಕಾರ ಒಟ್ಟು 4 ಕೋಟಿ ಮಂದಿಗೆ ಕೊವಿಡ್-19 ಲಸಿಕೆ ವಿತರಣೆ
* 3 ಕೋಟಿ ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ

ರಾಜ್ಯದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ
ರಾಜ್ಯದಲ್ಲಿ ಈವರೆಗೂ 7,62,666 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 6,07,457 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 9,37,279 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 5,33,211 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,41,53,243 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 71,37,822 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ 3,26,07,043 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 1,05,76,752 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತರ ಏರಿಳಿತ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಹೊಸ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.66ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 1.81ರಷ್ಟಿದೆ. ರಾಜ್ಯದಲ್ಲಿ ಒಂದು ದಿನದಲ್ಲಿ 1159 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1112 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 21 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 37339 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2950604ಕ್ಕೆ ಏರಿಕೆಯಾಗಿದೆ. ಒಟ್ಟು 2894827 ಸೋಂಕಿತರು ಗುಣಮುಖರಾಗಿದ್ದು. 18412 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಕೊರೊನಾವೈರಸ್ ಸಂಖ್ಯೆ?
ಬೆಂಗಳೂರು ನಗರವೊಂದರಲ್ಲಿ ಕಳೆದ ಒಂದು ದಿನದಲ್ಲಿ 359 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1238196ಕ್ಕೆ ಏರಿಕೆಯಾಗಿದೆ. 7 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 16000ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ 7558 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಒಟ್ಟು 1159 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 2, ಬಳ್ಳಾರಿ 6, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 9 ಬೆಂಗಳೂರು 359, ಬೀದರ್ 0, ಚಾಮರಾಜನಗರ 9, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 48, ಚಿತ್ರದುರ್ಗ 7, ದಕ್ಷಿಣ ಕನ್ನಡ 191, ದಾವಣಗೆರೆ 8, ಧಾರವಾಡ 8, ಗದಗ 4, ಹಾಸನ 81, ಹಾವೇರಿ 0, ಕಲಬುರಗಿ 5, ಕೊಡಗು 95, ಕೋಲಾರ 32, ಕೊಪ್ಪಳ 3, ಮಂಡ್ಯ 20, ಮೈಸೂರು 91, ರಾಯಚೂರು 0, ರಾಮನಗರ 1, ಶಿವಮೊಗ್ಗ 11, ತುಮಕೂರು 34, ಉಡುಪಿ 91, ಉತ್ತರ ಕನ್ನಡ 37, ವಿಜಯಪುರ 4, ಯಾದಗಿರಿ 0 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications