ಕೃಷ್ಣ ಅಳಿಯನ ಕೊರಳಿಗೆ ಸುತ್ತಿಕೊಂಡ ಭೂ ಹಗರಣ

ಹುಬ್ಬಳ್ಳಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ್, ಎಸ್.ಎಂ.ಕೃಷ್ಣ ಅಳಿಯ ಮತ್ತು ಉದ್ಯಮಿ ಸಿದ್ದಾರ್ಥ ಅವರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವುದಕ್ಕೆ ದಾಖಲೆ ಬಿಡುಗಡೆ ಮಾಡಿದರು. ಬೆಂಗಳೂರಿನ ಭೈರಸಂದ್ರದ ಸರ್ವೆ ನಂ 65ರಲ್ಲಿ 5 ಎಕರೆ ಸರ್ಕಾರಿ ಭೂಮಿಯನ್ನು ಪೆಟ್ರೋಲ್ ಬಂಕ್ ನಿರ್ಮಿಸುತ್ತೇವೆ ಎಂದು ಪಡೆದು, ಸಿದ್ದಾರ್ಥ ಅವರು ಕಾಫಿ ಡೇ ಮತ್ತು ಮೆಕ್ ಡೋನಾಲ್ಡ್ ನಿರ್ಮಾಣ ಮಾಡಿದ್ದಾರೆ ಎಂದು ಹಿರೇಮಠ್ ಆರೋಪಿಸಿದರು.
ಸಿದ್ದಾರ್ಥ ಅವರ ಜೊತೆಗೆ ರಾಜ ಭಾಗಮನೆ ಸಹ ಈ ಒತ್ತುವರಿಯಲ್ಲಿ ಪಾಲುದಾರರಾಗಿದ್ದಾರೆ ಎಂದು ಹಿರೇಮಠ್ ಆರೋಪಿಸಿದ್ದಾರೆ. ಎಸ್.ಎಂ.ಕೃಷ್ಣ ಕರ್ನಾಟಕದ ಸಿಎಂ ಆಗಿದ್ದಾಗ ಈ ಭೂ ಒತ್ತುವರಿ ನಡೆದಿದೆ. ಅಂದಿನ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಸಹ ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ಹಿರೇಮಠ್ ಗಂಭೀರ ಆರೋಪ ಮಾಡಿದ್ದಾರೆ.
ಅಂದು ಬಿಡಿಎ ಆಯುಕ್ತರಾಗಿದ್ದ ಜೈಕರ್ ಜರೋಮ್ ಸಹ ಈ ಒತ್ತುವರಿಗೆ ಸಹಾಯ ಮಾಡಿದ್ದು, ಅವರು ಎಸ್.ಎಂ.ಕೃಷ್ಣ ಅವರಿಗೆ ಆಪ್ತರಾಗಿದ್ದರು. ಇದಕ್ಕೆ ಪ್ರತಿಫಲವಾಗಿ ಕೃಷ್ಣ ಅವರು ವಿದೇಶಾಂಗ ಸಚಿವರಾದ ನಂತರ ಜೈರೋಮ್ ಅವರನ್ನು ವಿವಿಧ ದೇಶಗಳಿಗೆ ರಾಯಭಾರಿಯಾಗಿ ಕಳಿಸಿದ್ದರು ಎಂದು ಹಿರೇಮಠ್ ತಿಳಿಸಿದರು.
ಸರ್ಕಾರ ಈ ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಿದ್ದಾರ್ಥ ಅವರು ಭೂ ಒತ್ತುವರಿ ಮಾಡಿಕೊಂಡಿರುವುದಕ್ಕೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹಿರೇಮಠ್ ಹೇಳಿದ್ದರು ಅದರಂತೆ ದಾಖಲೆ ನೀಡಿ, ಹೋರಾಟ ಆರಂಭಿಸಿದ್ದಾರೆ.












Click it and Unblock the Notifications