ಪ್ರಶಾಂತ್ ಸಂಬರಗಿ FB ಪೋಸ್ಟ್‌ಗೆ ಉತ್ತರ ಕೊಟ್ಟ ಹೆಚ್. ಕುಸುಮಾ!
ಬೆಂಗಳೂರು, ಅಕ್ಟೋಬರ್ 06: ಕರ್ನಾಟಕದಲ್ಲಿ ಡ್ರಗ್ಸ್ ಪ್ರಕರಣದ ಸುದ್ದಿಗಳು ಪ್ರಸಾರವಾಗುತ್ತಿರುವಾಗ ಪದೇ ಪದೇ ಕೇಳಿ ಬರುವ ಹೆಸರು ಪ್ರಶಾಂತ್ ಸಂಬರಗಿ. ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೆಸರು ಪ್ರತಿದಿನ ಸಾಮಾಜಿಕ ಜಾಲತಾಣ, ಸುದ್ದಿ ವಾಹಿನಿಗಳ ಮೂಲಕ ಜನರಿಗೆ ಚಿರಪರಿಚಿತವಾಗಿದೆ.
ಪ್ರಶಾಂತ್ ಸಂಬರಗಿ ಹಾಕಿರುವ ಒಂದು ಫೇಸ್ ಬುಕ್ ಪೋಸ್ಟ್ ವೈರಲ್ ಆಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ದಿ. ಐಎಎಸ್ ಅಧಿಕಾರಿ ಡಿ. ಕೆ. ರವಿ ಅವರಿಗೆ ಸಂಬಂಧಿಸಿದ ಪೋಸ್ಟ್ ಇದು. ಡಿ. ಕೆ. ರವಿ ಪತ್ನಿ ಹೆಚ್. ಕುಸುಮಾ ಪ್ರಶಾಂತ್ ಸಂಬರಗಿ ಪೋಸ್ಟ್‌ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಭಾನುವಾರ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕುಸುಮಾ ಅವರು ಕಾಂಗ್ರೆಸ್ ಸೇರಿದ್ದಾರೆ. ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣಗೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. Kusuma Hanumantharayappa ಎಂಬ ಫೇಸ್ ಬುಕ್ ಖಾತೆ ಮೂಲಕ ಅವರು ಸಾಮಾಜಿಕ ತಾಲಜಾಣದಲ್ಲಿಯೂ ಸಕ್ರಿಯರಾಗಿದ್ದಾರೆ.
ಕುಸುಮಾ ಕಾಂಗ್ರೆಸ್ ಸೇರಿರುವ ಫೋಟೋ ಹಾಕಿ ಪ್ರಶಾಂತ್ ಸಂಬರಗಿ ಫೇಸ್ ಬುಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದು, ಕುಸುಮಾ ಸಹ ಇದಕ್ಕೆ ಉತ್ತರ ಕೊಟ್ಟಿದ್ದಾರೆ.

ಪ್ರಶಾಂತ್ ಸಂಬರಗಿ ಪೋಸ್ಟ್
ಪ್ರಶಾಂತ್ ಸಂಬರಗಿ ಫೇಸ್ ಬುಕ್ ಪೋಸ್ಟ್ ಒಂದನ್ನು ಹಾಕಿದ್ದು, Kusumas Bad luck transferring from DK Ravi to DK Shivakumar. Kasuma zindabad ಎಂದು ಬರೆದಿದ್ದಾರೆ. ಕುಸುಮಾ ಕಾಂಗ್ರೆಸ್ ಸೇರಿರುವ ಪೋಟೋವನ್ನು ಹಾಕಿದ್ದಾರೆ.

ಉತ್ತರ ಕೊಟ್ಟ ಕುಸುಮಾ
ಹೆಚ್. ಕುಸುಮಾ ಈ ಪೋಸ್ಟ್‌ಗೆ ಉತ್ತರ ನೀಡಿದ್ದಾರೆ. "ಸಹೋದರ ಪ್ರಶಾಂತ್ ಸಂಬರಗಿಯವರಿಗೆ, ವೈಯುಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ, ಕೆಲ ತಿಂಗಳುಗಳಿಂದ ನೀವು ಡ್ರಗ್ಸ್ ಹಾಗೂ ಇನ್ನಿತರ ಸಾಮಾಜಿಕ ಪಿಡುಗುಗಳ ವಿರುದ್ದ ನಡೆಸುತ್ತಿರುವ ಹೋರಾಟ ಪ್ರಶಂಸನೀಯ. ಯುವಸಮೂಹಕ್ಕೆ ಡ್ರಗ್ಸ್ ವಿರುದ್ದವಾಗಿ ಜಾಗ್ರತೆ ಮೂಡಿಸುತ್ತಿರುವ ನಿಮಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ.

ನಿಮ್ಮ ಘನತೆಗೆ ಶೋಭೆ ತರಲ್ಲ
"ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟ(Luck) ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರ ಬದುಕಿನಲ್ಲಿ ಇಣುಕುವ ನೀವು ಹಿಂದೆ-ಮುಂದೆ ತಿಳಿಯದೇ ಇನ್ನೊಬ್ಬರ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದಲ್ಲ ಎಂಬುದು ನನ್ನ ಅನಿಸಿಕೆ. ಪ್ರತಿಯೊಬ್ಬರ ಬದುಕಿನಲ್ಲೂ ಏಳು-ಬೀಳುಗಳಿರುತ್ತವೆ, ಇದೇ ರೀತಿ ನಿಮ್ಮ ಮನೆಯಲ್ಲೇ ಅಕ್ಕ-ತಂಗಿ ನನ್ನ ಸ್ಥಾನದಲ್ಲಿದ್ದಿದ್ದರೆ ಹೀಗೆಯೇ ವಿಡಂಬನೆ ಮಾಡುತ್ತಿದ್ದಿರಾ?" ಎಂದು ಕುಸುಮಾ ಪ್ರಶ್ನೆ ಮಾಡಿದ್ದಾರೆ.
Recommended Video

ದೇವರು ನಿಮಗೆ ಒಳ್ಳೆಯದು ಮಾಡಲಿ
"ಹೆಣ್ಣು ಎಂಬ ಮಾತ್ರಕ್ಕೆ ಇಂತಹ ವಿಡಂಬನೆ ಮತ್ತು ಅಪಪ್ರಚಾರಗಳಿಗೆ ಒಳಗಾಗಬೇಕೆ?. ಬೇರೆಯವರ ಮನೆಯ ಹೆಣ್ಣುಮಗಳ luck ಯಾವುದು ಎಂದು ಹುಡುಕುವ ಶಕ್ತಿ ಇರುವ ನಿಮಗೆ ಹತ್ರಾಸ್ ನ ಮನೀಷಾ ಅತ್ಯಾಚಾರ-ಕೊಲೆ ಪ್ರಕರಣ ಕಣ್ಣಿಗೆ ಕಾಣುತ್ತಿಲ್ಲವೇಕೆ?. ಸಹೋದರ ಪ್ರಶಾಂತ್ ಸಂಬರಗಿ ಅವರೇ, ಇದರಿಂದ ಹೆಣ್ಣುಮಕ್ಕಳ ಕುರಿತ ನಿಮ್ಮ ಬುದ್ದಿಮಟ್ಟ ತಿಳಿಯುತ್ತದೆ. ಈ ಆಲೋಚನೆಗಳನ್ನು ಮುಂದುವರಿಸಿ.
ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದು ಉತ್ತರ ಕೊಟ್ಟಿದ್ದಾರೆ.












Click it and Unblock the Notifications