ದೇವೇಗೌಡ-ಕುಮಾರಸ್ವಾಮಿ ಭೇಟಿ: ಲೋಕಸಭೆ ಸೀಟು ಹಂಚಿಕೆ ಚರ್ಚೆ
ಬೆಂಗಳೂರು, ಫೆಬ್ರವರಿ 21: ಇಂದು ಬೆಳಿಗ್ಗೆ ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ನಡುವೆ ಲೋಕಸಭೆ ಸೀಟು ಹಂಚಿಕೆ ಸಮಯ ಸನಿಹ ಬಂದಿರುವ ಕಾರಣ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸಿದ ನಂತರ ಕುಮಾರಸ್ವಾಮಿ ಅವರು ದೇವೇಗೌಡ ಅವರನ್ನು ಭೇಟಿ ಆಗಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಇಬ್ಬರೂ ನಾಯಕರು ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಜೆಡಿಎಸ್ ಪಕ್ಷವು ಯಾವ ಮತ್ತು ಎಷ್ಟು ಕ್ಷೇತ್ರಗಳ ಬೇಡಿಕೆ ಇಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಜೊತೆಗೆ ಮಂಡ್ಯ ರಾಜಕಾರಣದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಜೆಡಿಎಸ್‌ಗೆ ಕಡಿಮೆ ಸೀಟು: ಸಿಎಂ ಗರಂ
ಜೆಡಿಎಸ್‌ಗೆ ಆರು ಅಥವಾ ಏಳು ಸೀಟು ನೀಡುವ ಕಾಂಗ್ರೆಸ್‌ನ ಯೋಜನೆಗೆ ಸಿಎಂ ಕುಮಾರಸ್ವಾಮಿ ಗರಂ ಆಗಿ, 'ನಾವೇನು ಭಿಕ್ಷುಕರಲ್ಲ' ಎಂದು ಪ್ರತಿಕ್ರಿಯಿಸಿದ್ದರು. ಹಾಗಾಗಿ ಇಂದು ದೇವೇಗೌಡ ಅವರನ್ನು ಭೇಟಿ ಆದಾಗಲೂ ಸಹ ಜೆಡಿಎಸ್‌ಗೆ ಹೆಚ್ಚಿನ ಸೀಟು ಬೇಕೆಂದು ಎಚ್‌ಡಿಕೆ ಒತ್ತಾಯ ಮಾಡಿರುವ ಸಾಧ್ಯತೆ ದಟ್ಟವಾಗಿದೆ.

ಹೈಕಮಾಂಡ್‌ನಿಂದ ಕೆಪಿಸಿಸಿ ಮೇಲೆ ಒತ್ತಡ
ಕಾಂಗ್ರೆಸ್ ಪಕ್ಷವು ನಿನ್ನೆಯಷ್ಟೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಸೀಟು ಹಂಚಿಕೆ ಪ್ರಕಟ ಮಾಡಬೇಕಿದೆ. ಹೈಕಮಾಂಡ್‌ನಿಂದ ಕೆಪಿಸಿಸಿ ಮೇಲೆ ಒತ್ತಡವೂ ಹೆಚ್ಚುತ್ತಿದೆ.

ಹಲವು ಸಭೆ ನಡೆಸಿರುವ ಕಾಂಗ್ರೆಸ್
ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಈಗಾಗಲೇ ಹಲವು ಆಂತರಿಕ ಸಭೆಗಳನ್ನು ನಡೆಸಿದೆ. ಜೆಡಿಎಸ್‌ಗೆ ಆರು ಅಥವಾ ಏಳು ಕ್ಷೇತ್ರಗಳನ್ನು ನೀಡಿ ಉಳಿದ ಕ್ಷೇತ್ರಗಳಲ್ಲಿ ತಾವು ಸ್ಪರ್ಧಿಸುವ ಯೋಜನೆ ಕಾಂಗ್ರೆಸ್‌ಗೆ ಇದೆ.

ಕಾಂಗ್ರೆಸ್-ಜೆಡಿಎಸ್ ಮುಖಂಡರ ಸಭೆ
ಜೆಡಿಎಸ್‌ನ ದೇವೇಗೌಡ, ಎಚ್.ವಿಶ್ವನಾಥ್ ಇನ್ನು ಕೆಲವು ಮುಖಂಡರು ಕಾಂಗ್ರೆಸ್‌ನ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಅವರುಗಳು ಸಭೆ ನಡೆಸಿ ಸೀಟು ಹಂಚಿಕೆ ಅಂತಿಮ ಮಾಡಲಿದ್ದಾರೆ. ಇಂದು ದಿನೇಶ್ ಗುಂಡೂರಾವ್ ಅವರು ದೇವೇಗೌಡ ಅವರೊಂದಿಗೆ ಸಭೆ ನಡೆಸಿದ್ದು, ಪ್ರಾಥಮಿಕ ಹಂತದ ಚರ್ಚೆ ಮಾಡುತ್ತಿದ್ದಾರೆ.












Click it and Unblock the Notifications