ಕುಮಾರ್ ಅಂಬುಲೆನ್ಸ್, ವೈದ್ಯರ ಜೊತೆ ಬಿಜೆಪಿಗೆ ಸೇರಲಿ, ಮಧು ಬಂಗಾರಪ್ಪ
ಕುಮಾರ್ ಬಂಗಾರಪ್ಪ ಬಿಜೆಪಿ ಸೇರಲು ಹೋದಾಗ, ಅಂಬುಲೆನ್ಸ್ ಮತ್ತು ವೈದ್ಯರ ಜೊತೆ ಹೋಗಲಿ, ಮಧು ಬಂಗಾರಪ್ಪ ವ್ಯಂಗ್ಯ.
ಚಿತ್ರದುರ್ಗ ಫೆ 18: ಸ್ಪಷ್ಟ ಗುರಿಯಿಲ್ಲದವರು ಯಾವ ಪಕ್ಷಕ್ಕೆ ಸೇರಿದರೂ ಅದರಿಂದ ಯಾರಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ, ಸಹೋದರ ಕುಮಾರ್ ಬಂಗಾರಪ್ಪ ಬಗ್ಗೆ ವ್ಯಂಗ್ಯ ವಾಡಿದ್ದಾರೆ.
ನಗರದಲ್ಲಿ ಶುಕ್ರವಾರ (ಫೆ 17) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಧು, ರಾಜಕೀಯ ಅಸ್ತಿತ್ವದ ಹುಡುಕಾಟದಲ್ಲಿ ಕುಮಾರ್ ಇರುವುದರಿಂದ ಅವರು ಯಾವ ಪಕ್ಷದಲ್ಲಿದ್ದರೂ ನನಗೆ ಅದರಿಂದ ಹಿನ್ನಡೆಯಾಗುವುದಿಲ್ಲ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಹೇಳಿದ್ದಾರೆ. (ಕುಮಾರ್ ಬಂಗಾರಪ್ಪ ಸಂದರ್ಶನ)
ಕುಮಾರ್ ಬಂಗಾರಪ್ಪ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಮಧು, ಈ ಹಿಂದೆ ಎರಡೇ ವಾರದಲ್ಲಿ ಬಿಜೆಪಿ ಬಿಟ್ಟು ಕುಮಾರ್ ಬಂದಿದ್ದರು. ಬಿಜೆಪಿಯಲ್ಲಿ ಉಸಿರು ಕಟ್ಟುವ ವಾತಾವರಣವಿದೆ ಎಂದು ವಿವರಣೆ ನೀಡಿದ್ದರು.

ಈಗ ಮತ್ತೆ ಬಿಜೆಪಿ ಸೇರುತ್ತಿದ್ದಾರೆ, ಹಾಗಾಗಿ ಕುಮಾರ್ ಜೊತೆ ಅಂಬುಲೆನ್ಸ್ ಮತ್ತು ವೈದ್ಯರ ತಂಡವನ್ನು ಕಳುಹಿಸಿಕೊಟ್ಟರೆ, ಅವರಿಗೆ ಉಸಿರಾಟದ ಸಮಸ್ಯೆ ಇರುವುದಿಲ್ಲ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಕುಮಾರ್ ಬಂಗಾರಪ್ಪನವರಿಗೆ ಆಹ್ವಾನ ಹೋಗುವ ಸಾಧ್ಯತೆ ಇದೆಯಾ ಎನ್ನುವ ಪ್ರಶ್ನೆಗೆ, ರಾಷ್ಟ್ರೀಯ ಪಕ್ಷ ಸೇರಲು ಹೊರಟವರಿಗೆ ಪ್ರಾದೇಶಿಕ ಪಕ್ಷಕ್ಕೆ ಬನ್ನಿ ಎಂದು ಹೇಳುವಷ್ಟು ದೊಡ್ಡ ಪಕ್ಷ ನಮ್ಮದಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಯಾವ ಪಕ್ಷದಲ್ಲೇ ಇರಲಿ, ಆ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಕುಮಾರ್ ಬಂಗಾರಪ್ಪ ಕಲಿಯಲಿ ಎಂದು ಸಹೋದರ ಮಧು ಬಂಗಾರಪ್ಪ ಸಲಹೆ ನೀಡಿದ್ದಾರೆ.
ಹುಟ್ಟು ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆ ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಬಂಗಾರಪ್ಪ ಕುಟುಂಬದ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.












Click it and Unblock the Notifications