KSRTC tickets: ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು, ಜೂನ್. 10: ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ಹಲವು ಹೊಸ ಪ್ರಯೋಗಗಳು ನಡೆಯುತ್ತಲೆ ಇವೆ. ಬಸ್‌ನಲ್ಲಿ ಪಾಸ್‌ಗಳ ಜೊತೆಗೆ ಹೊಸ ಆಪ್ ಮೂಲಕ ಪಾಸ್ ನವೀಕರಿಸಿಕೊಳ್ಳಬಹುದು. ಈ ಮೂಲಕ ಟಿಕೆಟ್ , ಪಾಸ್ ಕಳೆದು ಹೋದ ಭಯವಿರುವುದಿಲ್ಲ. ಇದರ ಜೊತೆಗೆ ಈಗ ಕೆಎಸ್‌ಆರ್‌ಟಿಸಿ ತನ್ನ ಪ್ರಯಾಣಿಕರಿಗೆ ಹೊಸ ಅಪ್‌ಡೇಟ್ ನೀಡಿದೆ.
ಈಗ ದೇಶದಲ್ಲಿ ಜನ ಕ್ಯಾಶ್‌ಲೆಸ್ ಮೋಡ್‌ಗೆ ತಿರುಗಿದ್ದಾರೆ. ಹಣ ಕ್ಯಾರಿ ಮಾಡುವುದನ್ನು ಮರೆತೆ ಬಿಟ್ಟಿದ್ದಾರೆ. ಫೋನ್ ಇದ್ದರೆ ಸಾಕು ಎಂಬಂತಾಗಿದ್ದಾರೆ. ಎಲ್ಲೆಡೆ ಯುಪಿಎ ಬಳಕೆ ಹೆಚ್ಚಾಗಿದೆ. ಇದನ್ನು ಮನಗಂಡ ಕೆಎಸ್‌ಆರ್‌ಟಿಸಿ ಕೂಡ ಬಸ್‌ಗಳಲ್ಲಿ ಟಿಕೆಟ್ ಕೊಳ್ಳಲು ಯುಪಿಎ ಪಾವತಿಗೆ ಅವಕಾಶ ಮಾಡಿಕೊಡಲಿದೆ.

ಈ ಜೂನ್ 25 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದು. ಹಣವನ್ನು ತೆಗೆದುಕೊಂಡು ಹೋಗುವ ಬಗ್ಗೆ ಚಿಂತಿಸಬೇಕಾಗಿಲ್ಲ. ಕೆಎಸ್‌ಆರ್‌ಟಿಸಿ ಜೂನ್ 25 ರಿಂದ ನಾಲ್ಕು ಡಿಪೋಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ. ಎಲ್ಲಾ ಕಂಡಕ್ಟರ್‌ಗಳಿಗೆ ತರಬೇತಿ ನೀಡಿದ ನಂತರ ಕೆಲವೇ ವಾರಗಳಲ್ಲಿ ಇದನ್ನು ಎಲ್ಲಾ ಬಸ್‌ಗಳಿಗೆ ವಿಸ್ತರಿಸಲಾಗುವುದು.
ಸಾರಿಗೆ ನಿಗಮವು ಪ್ರತಿ ಸಾಧನಕ್ಕೆ ತಿಂಗಳಿಗೆ 645 ರೂಪಾಯಿ ಬಾಡಿಗೆಗೆ 10,245 ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ತೆಗೆದುಕೊಂಡಿದೆ. ಮೊದಲು ಪ್ರಯೋಗ ನಡೆಸಿ ಬಳಿಕ ಎಲ್ಲೆಡೆ ಇದನ್ನು ಜಾರಿಗೆ ತರಲು ಪ್ರಯತ್ನಿಸುವುದಾಗಿ ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
"ಪ್ರಯೋಗಗಳ ನಂತರ, ನಾವು ಈ ತಿಂಗಳ ಅಂತ್ಯದಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಪರಿಚಯಿಸುತ್ತಿದ್ದೇವೆ. ಪ್ರಯಾಣಿಕರು ಈ ಬದಲಾವಣೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಕಂಡಕ್ಟರ್‌ಗಳು ಚಿಲ್ಲರೆ ಕೊಡುವುದಿಲ್ಲ ಎಂಬ ಬಗ್ಗೆಯೂ ಯಾವುದೇ ದೂರುಗಳಿಲ್ಲ. ಇಟಿಎಂ ಗಳೊಂದಿಗೆ, ಪ್ರಯಾಣಿಕರು GPay, PhonePe, Paytm ಮತ್ತು ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿಸಬಹುದು" ಎಂದು ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ತಿಳಿಸಿದ್ದಾರೆ.

EbixCash Ltd ಐದು ವರ್ಷಗಳ ಕಾಲ ಇಟಿಎಂಗಳನ್ನು ನೀಡಲು ಮತ್ತು ಕೆಎಸ್‌ಆರ್‌ಟಿಸಿಯನ್ನು ಬುದ್ಧಿವಂತ ಸಾರಿಗೆ ನಿರ್ವಹಣಾ ವ್ಯವಸ್ಥೆಗೆ ಪರಿವರ್ತಿಸಲು ಸಹಾಯ ಮಾಡಲು ಒಪ್ಪಂದ ಮಾಡಿಕೊಂಡಿದೆ. ಕಂಪನಿಯು ಇಟಿಎಂಗಳಿಗೆ ಬ್ಯಾಕೆಂಡ್ ಮತ್ತು ಇಂಟರ್ಫೇಸ್ ಸಾಫ್ಟ್‌ವೇರ್ ಅನ್ನು ಒದಗಿಸುತ್ತದೆ. ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಈ ಯಂತ್ರಗಳನ್ನು ಬಳಸುವ ಕಂಡಕ್ಟರ್‌ಗಳು ಹತ್ತುವ ಮತ್ತು ಇಳಿಯುವ ನಿಲ್ದಾಣಗಳನ್ನು ಆಯ್ಕೆ ಮಾಡಬೇಕು ಮತ್ತು ಪ್ರಯಾಣಿಕರ ಸಂಖ್ಯೆ ಮತ್ತು ಪಾವತಿ ವಿಧಾನವನ್ನು ಆರಿಸಬೇಕಾಗುತ್ತದೆ. ದರವನ್ನು ಯಂತ್ರ ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಮೊತ್ತವನ್ನು ಪಾವತಿಸಿದ ನಂತರ ಟಿಕೆಟ್ ಸಿಗುತ್ತದೆ. ಯಂತ್ರಗಳನ್ನು ಲಾಕ್ ಮಾಡಬಹುದು. ಅವುಗಳು ಕಳ್ಳತನವಾದರೆ ಸ್ಮಾರ್ಟ್‌ಫೋನ್‌ನಂತೆ ಟ್ರ್ಯಾಕ್ ಮಾಡಬಹುದು" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇವುಗಳಲ್ಲಿ ಇ-ಪಾಸ್‌ಗಳಂತಹ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ವ್ಯಾಲಿಡ್ ಮಾಡಲು ಕ್ಯಾಮರಾಗಳಿವೆ. ಒಂದು ವೇಳೆ ಸರ್ಕಾರವು ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಿದರೆ, ಅದನ್ನೂ ಇದರಲ್ಲಿ ಅಳವಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications