KSRTC Employees: ಗುಡ್ ನ್ಯೂಸ್, ಸರ್ಕಾರಿ ನೌಕರರಂತೆ ವೇತನ ಪಾವತಿಗೆ ಆದೇಶ
ಬೆಂಗಳೂರು, ಆಗಸ್ಟ್ 10: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯ ನೌಕರರ ಬಹುದಿನಗಳ ಬೇಡಿಕೆ ಈಡೇರಿದೆ. ಅದೇನೆಂದರೆ ಇತರ ಸರ್ಕಾರಿ ನೌಕರರಂತೆ ತಮಗೂ ವೇತನವನ್ನು ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ಪಾವತಿಸುವಂತೆ ಕೇಳಿಕೊಳ್ಳಲಾಗಿತ್ತು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅವರ ಬೇಡಿಕೆ ಈಡೇರಿಸಿದ್ದು, ಎಚ್‌ಆರ್‌ಎಂಸ್ ಮೂಲಕ ವೇತನ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
ಆಗಸ್ಟ್ ತಿಂಗಳಿನಿಂದ ಜಾರಿಗೆ ಬರುವಂತೆ ಸಾರಿಗೆ ನೌಕರರು ಸರ್ಕಾರಿ ನೌಕರರಂತೆ ವೇತನವನ್ನು ಈ ವ್ಯವಸ್ಥೆ ಮೂಲಕ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಆದೇಶ ಹೊರಡಿಸಿದೆ.

ಈ ಆದೇಶದಲ್ಲಿ ''ಕರಾರಸಾ ನಿಗಮದಲ್ಲಿ ಈಗಾಗಲೇ ಹೆಚ್.ಆರ್.ಎಂ.ಎಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಎಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ದಾಖಲಾಗುವ ಹಾಜರಾತಿ ಮತ್ತು ರಜಾ ಮಂಜೂರಾತಿಯನ್ವಯ ಇದೇ 2024ರ ಆಗಸ್ಟ್ ತಿಂಗಳಿಂದಕಡ್ಡಾಯವಾಗಿ ಎಚ್.ಆರ್.ಎಂ.ಎಸ್ ತಂತ್ರಾಂಶದ ಅಡಿಯಲ್ಲಿ ನಿಗಮದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ವೇತನ ಬಿಲ್ಲುಗಳನ್ನು ತಯಾರಿಸಿ ಪಾವತಿಸಲು ಕ್ರಮಕೈಗೊಳ್ಳಬೇಕು.
ಇನ್ನೂ ಎಚ್.ಆರ್.ಎಂ.ಎಸ್ ತಂತ್ರಾಂಶ ಹೊರತುಪಡಿಸಿ, ಇತರೇ ಮಾದರಿಯ ವೇತನ ಬಿಲ್ಲುಗಳನ್ನು ತಯಾರಿಸಲು ಅವಕಾಶ ಇಲ್ಲ'' ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆಯಾ ಘಟಕ/ವಿಭಾಗ/ಪ್ರಾ.ಕಾರ್ಯಾಗಾರ/ಕೇಂದ್ರ ಕಛೇರಿಗಳಲ್ಲಿ ಎಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ವೇತನ ಬಿಲ್ಲುಗಳನ್ನು ತಯಾರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಆದೇಶದ ಮೂಲಕ ಸೂಚಿಸಲಾಗಿದೆ.
ಎಚ್‌ಆರ್‌ಎಂಎಸ್ ನಿಂದ ಸಿಗುವ ಸೌಕರ್ಯಗಳು ಏನು?
ಈ ಎಚ್‌ಆರ್‌ಎಂಎಸ್ (Human Resource Management System) ಅಡಿ ರಾಜ್ಯ ಸರ್ಕಾರಿ ನೌಕರರು ವೇತನ ಪಡೆದರೆ, ಕೆಜಿಐಡಿ ಮೂಲಕ ನೋಂದಣಿ ಮಾಡಿಕೊಂಡು ನೇರವಾಗಿ ವೇತನ ಪೇ ಸ್ಲಿಪ್ ಪಡೆಯಬಹುದು. ಇದೇ ರೀತಿ ಸಾರಿಗೆ ನೌಕರರು ಇನ್ನು ಮುಂದೆ ವೇತನ, ಸ್ಲಿಪ್ ಪಡೆಯಲಿದ್ದಾರೆ.

ಸಾರಿಗೆ ನೌಕರರು ತಮಗೆ ಎಷ್ಟು ರಜೆ ಇವೆ ಎಂದು ಎಚ್‌ಆರ್‌ಎಂಎಸ್‌ನಲ್ಲಿ ಪರಿಶೀಲಿಸಬಹುದು. ಮುಂದಿನ ರಜೆ ಪಡೆಯಲು ಅವರು ಅನುಕೂಲವಾಗಲಿದೆ. ಅಲ್ಲದೇ ಸಾಲ ಅಥವಾ ಮುಂಗಡದ ವಿವರ ವೀಕ್ಷಿಸುವ ಜೊತೆಗೆ ಉದ್ಯೋಗಿಗಳು ವೇತನ ಕಡಿತ, ಆದಾಯ ತೆರಿಗೆ (IT), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್‌ಪಿಎಸ್ ಮುಂತಾದ ಸೌಲಭ್ಯಗಳ ಡೇಟಾ ಪರಿಶೀಲಿಸಬಹುದು.












Click it and Unblock the Notifications