KSRTC: ಕೆಎಸ್ಆರ್‌ಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ, ಚಿಲ್ಲರೆ ವಿಚಾರಕ್ಕೆ ಜಗಳ ಬಿಡ್ರಿ!
ಬೆಂಗಳೂರು, ನವೆಂಬರ್ 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗುವತ್ತ ಹೆಜ್ಜೆ ಹಾಕಿದೆ. ದಿನದಿಂದ ದಿನಕ್ಕೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದಿನ ಯುಗಕ್ಕೆ ತಕ್ಕಂತೆ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಸಂಪೂರ್ಣ ಡಿಜಿಟಲ್ ಆಗುವತ್ತ ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ಪ್ರಾಯೋಗಿಕ ಯೋಜನೆಯನ್ನು ಆಯ್ದ ಬಸ್‌ಗಳಲ್ಲಿ ಜಾರಿಗೊಳಿಸಿದೆ.
ಡಿಜಿಟಲ್ ಪೇಮೆಂಟ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ತಮ್ಮ ಜೇಬು ಖಾಲಿ ಎಂದು ಹೇಳಿದರೂ ಮೊಬೈಲ್‌ನಲ್ಲಿ ದುಡ್ಡು ಅಡಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ 'ಚಿಲ್ಲರೆ' ವಿಚಾರಕ್ಕೆ ಜಗಳ ಆಗುವುದನ್ನು ತಪ್ಪಿಸಲು ನಿಗಮ ಮೊದಲ ಹೆಜ್ಜೆ ಇಟ್ಟಿದೆ.

ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಳಿಕ ಕೆಎಸ್ಆರ್‌ಟಿಸಿ ತನ್ನ ಆಯ್ದ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತಂದಿದೆ. ಸದ್ಯ ಕೆಲವು ಬಸ್‌ಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಹಂತ ಹಂತವಾಗಿ ಎಲ್ಲಾ ಮಾದರಿ ಬಸ್‌ಗಳಲ್ಲಿ ಈ ಸೌಲಭ್ಯ ಜಾರಿಗೊಳಿಸಲು ಕೆಎಸ್ಆರ್‌ಟಿಸಿ ಮುಂದಾಗಿದೆ.
ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ: ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಸಂಚಾರ ನಡೆಸುವಾಗ ಜೇಬಿನಲ್ಲಿ ಹಣವಿಲ್ಲದಿದ್ದರೂ ಇನ್ನು ಮುಂದೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು. ಇದರಿಂದಾಗಿ ಜನರು ಹಣ ತರುವುದು ಮರೆತರೂ ಟಿಕೆಟ್ ಪಡೆಯಲು ಅನುಕೂಲವಾಗಲಿದೆ. ಅಲ್ಲದೇ ಚಿಲ್ಲರೆ ವಿಚಾರಕ್ಕೆ ಬಸ್‌ಗಳಲ್ಲಿ ಆಗುವ ವಾಗ್ವಾದಕ್ಕೆ ತಡೆ ಬೀಳಲಿದೆ.
ಇದೀಗ ಕೆಎಸ್ಆರ್‌ಟಿಸಿಯ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ಸೌಲಭ್ಯ. ಪ್ರಯಾಣಿಕರು ನಿರ್ವಾಹಕರಿಂದ ಡೈನಮಿಕ್ ಕ್ಯುಆರ್ ಕೋಡ್ ಮೂಲಕ ಟಿಕೆಟ್ ಪಡೆಯಬಹುದು ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಫೋನ್ ಪೇ, ಗೂಗಲ್ ಪೇ, ಭೀಮ್, ಯಪಿಐ ನಾಲ್ಕು ವ್ಯವಸ್ಥೆಗಳ ಮೂಲಕ ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ.
ಈ ಸೌಲಭ್ಯದ ಬಳಕೆಗಾಗಿಯೇ ಕೆಎಸ್ಆರ್‌ಟಿಸಿ ನಿರ್ವಾಹಕರಿಗೆ ಎಲೆಕ್ಟ್ರಿಕ್ ಟಿಕೆಟ್ ಮಷಿನ್ (ಇಟಿಎಂ)ಗಳನ್ನು ನೀಡಿದೆ. ಎಲ್ಲಿಂದ, ಎಲ್ಲಿಗೆ ಪ್ರಯಾಣ ಎಂದು ವಿವರ ನೋಂದಾಯಿಸಿದ ಬಳಿಕ ಪ್ರಯಾಣಿಕರು ವಯಸ್ಕರೋ, ಮಕ್ಕಳೋ ಎಂಬ ಆಯ್ಕೆ ಬರುತ್ತದೆ.
ನಿರ್ವಾಹಕರು ವಿವರ ಭರ್ತಿ ಮಾಡಿದ ಬಳಿಕ ಟಿಕೆಟ್‌ನ ಮೊತ್ತ, ಟಿಕೆಟ್‌ಗೆ ಹಣ ನೀಡುವ ಆಯ್ಕೆಯನ್ನು ಕೇಳುತ್ತದೆ. ಇಲ್ಲಿ ಕ್ಯಾಷ್, ಡಿಜಿಟಲ್ ಪೇಮೆಂಟ್ ಸೌಲಭ್ಯ ನೀಡಲಾಗಿದೆ. ಪ್ರಯಾಣಿಕರ ಆಯ್ಕೆಯಂತೆ ಡಿಜಿಟಲ್ ಪೇಮೆಂಟ್ ಮಾಡುವುದಾದರೆ ನಿರ್ವಾಹಕರು ಕ್ಯುಆರ್ ಕೋಡ್ ತೆರೆಯುತ್ತಾರೆ. ಕೈಯಲ್ಲಿರುವ ಮೊಬೈಲ್ ಮೂಲಕ ನೀವು ಹಣ ಪಾವತಿ ಮಾಡಿ ಟಿಕೆಟ್ ಪಡೆಯಬಹುದು.
ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಈಗಾಗಲೇ ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಜಾರಿಯಲ್ಲಿದ್ದು, ಯಶಸ್ವಿಯಾಗಿದೆ. ಕೆಎಸ್ಆರ್‌ಟಿಸಿ ಸ್ವಲ್ಪ ತಡವಾಗಿಯೇ ಈ ಮಾದರಿಯನ್ನು ಅನುಷ್ಠಾನಗೊಳಿಸುತ್ತಿದೆ. ಹಂತ ಹಂತವಾಗಿ ಈ ವ್ಯವಸ್ಥೆಯನ್ನು ಎಲ್ಲಾ ಬಸ್‌ಗಳಲ್ಲಿ ಪರಿಚಯಿಸಲು ನಿಗಮ ಮುಂದಾಗಿದೆ.
ಕೆಎಸ್ಆರ್‌ಟಿಸಿಯಲ್ಲಿ 17 ವಿಭಾಗಗಳು, 83 ಘಟಕಗಳು, 8,360 ಬಸ್‌ಗಳು ಇವೆ. ಸದ್ಯ ಮಾಹಿತಿ ಪ್ರಕಾರ ಸುಮಾರು 10,000 ಡಿಜಿಟಲ್ ಪೇಮೆಂಟ್ ಎನಬಲ್ ಮೆಷಿನ್‌ಗಳು ಬೇಕು ಎಂದು ಅಂದಾಜಿಸಲಾಗಿದೆ. ಆದ್ದರಿಂದ ಆಯ್ದ ಕೆಲವು ಮಾರ್ಗದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹಂತ ಹಂತವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.
ಪ್ರತಿ ದಿನ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಸುಮಾರು 32.33 ಲಕ್ಷ ಜನರು ಪ್ರಯಾಣಿಸುತ್ತಾರೆ. ಪ್ರಯಾಣಿಕರು ಬಸ್ ಏರುವಾಗ ಚಿಲ್ಲರೆಗಾಗಿ ತಡಕಾಡುವ ಸಮಸ್ಯೆಗೆ ಡಿಜಿಟಲ್ ಪೇಮೆಂಟ್ ಸಮಸ್ಯೆ ಪರಿಹಾರ ನೀಡಿದೆ. ಸದ್ಯ ನಿರ್ವಾಹಕರು ಟಿಕೆಟ್ ಹಿಂದೆ ಚಿಲ್ಲರೆ ಎಷ್ಟು ಕೊಡಬೇಕು ಎಂದು ಬರೆದುಕೊಡುತ್ತಾರೆ. ಪ್ರಯಾಣಿಕರು ಇಳಿಯುವಾಗ ಚಿಲ್ಲರೆ ಸಮಸ್ಯೆ ಶುರುವಾಗುತ್ತದೆ. ಆಗ ವಾಗ್ವಾದವೂ ನಡೆಯುತ್ತದೆ. ಇದನ್ನು ತಪ್ಪಿಸಲು ಡಿಜಿಟಲ್ ಪೇಮೆಂಟ್ ಸುಲಭ ಪರಿಹಾರವಾಗಿದೆ.












Click it and Unblock the Notifications