ಬೆಂಗಳೂರು-ಸೋಮನಾಥಪುರ ಕೆಎಸ್ಆರ್ಟಿಸಿ ಟೂರ್ ಪ್ಯಾಕೇಜ್; ದರ, ಸಮಯ ವಿವರ
ಕಾವೇರಿ ಕೊಳ್ಳದಲ್ಲಿ ಮಳೆಯಾಗುತ್ತಿದ್ದು, ನದಿಯ ಹರಿವು ಹೆಚ್ಚಾಗಿದೆ. ಗಗನ ಚುಕ್ಕಿ, ಭರಚುಕ್ಕಿ ಜಲಪಾತಗಳು ಮೈದುಂಬಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಮಳೆಗಾಲದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರವಾಸ ಮಾಡುವುದು ಕಷ್ಟ, ಇನ್ನು ಒಂದೇ ದಿನದಲ್ಲಿ ಎಲ್ಲಾ ಕಡೆ ಬಸ್‌ಗಳಲ್ಲಿ ಸಂಚಾರ ಮಾಡಲು ಸಮಯ ಸಾಲುವುದಿಲ್ಲ, ಇದಕ್ಕಾಗಿಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಹೊಸ ಟೂರ್ ಪ್ಯಾಕೇಜ್ ಅನ್ನು ಪರಿಚಯಿಸಿದೆ.

ಬೆಂಗಳೂರು-ಸೋಮನಾಥಪುರ ಪ್ಯಾಕೇಜ್ ಟೂರ್ ಅನ್ನು ಸಾರ್ವಜನಿಕ ಅನುಕೂಲಕ್ಕಾಗಿ ಪರಿಚಯಿಸಿದ್ದು, ವಾರಾಂತ್ಯದಲ್ಲಿ ಈ ಸೇವೆ ಇರಲಿದೆ. ಶನಿವಾರ ಮತ್ತು ಭಾನುವಾರ ಬೆಂಗಳೂರಿನಿಂದ ಹೊರಡುವ ಬಸ್ ಸೋಮನಾಥಪುರ, ತಲಕಾಡು ಪಂಚಲಿಂಗೇಶ್ವರ ದರ್ಶನ, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಸ್ಥಳಗಳನ್ನು ವೀಕ್ಷಣೆ ಮಾಡಿಕೊಂಡು ಅದೇ ದಿನ ಬೆಂಗಳೂರಿಗೆ ವಾಪಸ್ ಆಗಲಿದೆ.
ಜುಲೈ 20ರಿಂದ ಈ ಪ್ಯಾಕೇಜ್ ಟೂರ್ ಆರಂಭವಾಗಲಿದೆ. ಒಂದು ದಿನದ ಪ್ರವಾಸಕ್ಕಾಗಿ ವಯಸ್ಕರಿಗೆ 500 ರೂಪಾಯಿ, 6-12 ವರ್ಷದ ಮಕ್ಕಳಿಗೆ 350 ರೂಪಾಯಿ ನಿಗದಿಪಡಿಸಲಾಗಿದೆ. (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಹೊರತುಪಡಿಸಿ) ಈ ದರ ನಿಗದಿ ಮಾಡಲಾಗಿದೆ.
ಪ್ರವಾಸ ವೇಳಾಪಟ್ಟಿ
ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಬಸ್ ಹೊರಡಲಿದ್ದು 8.30ಕ್ಕೆ ಮದ್ದೂರಿನಲ್ಲಿ ಉಪಹಾರಕ್ಕೆ ನಿಲ್ಲಿಸಲಿದೆ. ಮದ್ದೂರಿನಿಂದ ಸೋಮನಾಥಪುರ, ಸೋಮನಾಥೇಶ್ವರ ದರ್ಶನ ಮಾಡಿಕೊಂಡು ಅಲ್ಲಿಂದ ತಲಕಾಡಿಗೆ ಬರಲಿದೆ. ತಲಕಾಡಿನಲ್ಲಿ ಪಂಚಲಿಂಗ ದರ್ಶನ ಪಡೆದು, ಊಟ ಮುಗಿದ ಬಳಿಕ, ಮಧ್ಯರಂಗಕ್ಕೆ ತೆರಳಿ ರಂಗನಾಥಸ್ವಾಮಿ ದರ್ಶನ ಪಡೆದು, ಅಲ್ಲಿಂದ ಭರಚುಕ್ಕಿಗೆ ತೆರಳಲಿದೆ. ಭರಚುಕ್ಕಿ ನೋಡಿದ ಬಳಿಕ ಗಗನ ಚುಕ್ಕಿ ವೀಕ್ಷಣೆ ಮುಗಿಸಿಕೊಂಡು ಸಂಜೆ 6-15ಕ್ಕೆ ಹೊರಡಲಿದ್ದು, ರಾತ್ರಿ 9 ಗಂಟೆಗೆ ಬೆಂಗಳೂರು ತಲುಪಲಿದೆ.












Click it and Unblock the Notifications