ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಮತ್ತೆ ಜೂನ್ 30 ರವರೆಗೆ ವಿಸ್ತರಣೆ:KSRTC
ಬೆಂಗಳೂರು, ಜೂನ್ 14: ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ, ಕಾಲೇಜುಗಳು ಆರಂಭವಾಗಿ ಸುಮಾರು ಎರಡು ವಾರ ಕಳೆಯುತ್ತಾ ಬಂದಿದೆ. ವಿದ್ಯಾರ್ಥಿಗಳು ನಿತ್ಯ ತಮ್ಮ ಶೈಕ್ಷಣಿಕ ಸಂಸ್ಥೆಗಳತ್ತ ಓಡಾಟ ಆರಂಭಿಸಿದ್ದಾರೆ. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಮತ್ತೆ ಬಸ್ ಪಾಸ್ ವಿಸ್ತರಣೆ ಮಾಡಿ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ಪ್ರಸ್ತಕ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಿವೆ. ಮತ್ತೊಂದೆಡೆ ಶಾಲಾ ದಾಖಲಾತಿಯು ನಡೆಯುತ್ತಿದೆ. ಶೈಕ್ಷಣಿಕ ತರಗತಿಗೆ ಹಾಜರಾಗಲು ಅನುಕೂಲವಾಗುವಂತೆ KSRTC ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿಯನ್ನು ಜೂನ್ 30 ರವರೆಗೂ ವಿಸ್ತರಿಸಿ ಸಾರಿಗೆ ನಿಗಮ ಬುಧವಾರ ಸುತ್ತೋಲೆ ಹೊರಡಿಸಿದೆ. ಇದು ಶಾಲಾ ಮತ್ತು ಕಾಲೇಜುಗಳಿಗೆ ಅನ್ವಯವಾಗುತ್ತದೆ.

ಸರ್ಕಾರದ ಈ ವಿಸ್ತರಣೆಯು ಎಲ್ಲ ವರ್ಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪಾಸ್ ಪಡೆಯಲು ಮತ್ತಷ್ಟು ಕಾಲಾವಕಾಶ ಪಡೆಯಲು ಅನುಕೂಲವಾಗಲಿದೆ. ಜೂನ್ 30ರವರೆಗೆ ಶಾಲೆ-ಕಾಲೇಜುಗಳಿಗೆ ಓಡಾಡಲಿರುವ ವಿದ್ಯಾರ್ಥಿಗಳು ಶಾಲಾ ಶುಲ್ಕ ರಸೀದಿ ಇಲ್ಲವೇ ಹಿಂದಿನ ವರ್ಷದ ಪಾಸ್ ತೋರಿಸಿ ಓಡಾಡಬಹುದು.
ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಗರ, ಹೊರ ವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್ಸುಗಳಲ್ಲಿ ಪ್ರಯಾಣ ಇನ್ನೂ 15 ದಿನ ಅವಕಾಶ ನೀಡಿ ನಿಗಮವು ಸುತ್ತೋಲೆ ಹೊರಿಡಿಸಿದೆ.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಯು ಪ್ರಸ್ತಕ 2023-24 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಉಚಿತ ಅಥವಾ ರಿಯಾಯಿತಿ ಬಸ್ ಪಾಸುಗಳನ್ನು ಇಡಿಸಿಎಸ್ ಎಲಾಖೆಯ ಸೇವಾಸಿಂಧು ಪೋರ್ಟಲ್ ತಂತ್ರಜ್ಞಾನದ ಮೂಲಕ ಸಂಪೂರ್ಣ ಯಂತ್ರೀಕೃತವಾಗಿ ವಿತರಿಸಲು ಕ್ರಮ ಕೈಗೊಂಡಿದೆ. ಇನ್ನೇನು ಜೂನ್ 15ರಿಂದ ಪಾಸ್‌ಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಶುರುವಾಗಲಿದೆ. ವಿತರಣೆಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ನಿಗಮದ ಮೂಲಗಳು ತಿಳಿಸಿವೆ.












Click it and Unblock the Notifications