KSRTC: ಮೃತ ಪ್ರಯಾಣಿಕರ ಪರಿಹಾರ 10 ಲಕ್ಷ ರೂ.ಗೆ ಹೆಚ್ಚಳ: ಚೆಕ್ ವಿತರಿಸಿದ ಸಚಿವ
ಬೆಂಗಳೂರು, ಫೆಬ್ರವರಿ 19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಸೇವೆಯಿಂದ ಸಾಕಷ್ಟು ಹೆಸರು ಮಾಡಿದ್ದು, ಅನೇಕ ಗೌರವ-ಪ್ರಶಸ್ತಿಗಳಿಗೂ ಪಾತ್ರವಾಗಿದೆ. ಈ ನಿಗಮವು ಜನವರಿ 2024 ರಿಂದ ಅನ್ವಯವಾಗುವಂತೆ ಅಪಘಾತ ಪರಿಹಾರ ಮೊತ್ತವನ್ನು ಇದೇ ಮೊದಲ ಬಾರಿಗೆ ರೂ.10 ಲಕ್ಷಕ್ಕೆ ಹೆಚ್ಚಿಸಿದೆ.
ಸೋಮವಾರ ಕರ್ನಾಟಕ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು, ಹಾಗೂ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್(ವಾಸು) ರವರು ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರೊಬ್ಬರ ಕುಟುಂಬಕ್ಕೆ ಇದೇ ಮೊದಲ ಬಾರಿಗೆ 10 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ವಿತರಿಸಿದರು.

ಮೊದಲಿದ್ದ ಪರಿಹಾರ ಮೊತ್ತವೆಷ್ಟು?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನಿಗಮದ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಮೃತಪಟ್ಟರೆ ಅವರ ಅವಲಂಬಿರಿಗೆ ಈ ಹಿಂದೆ 3 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ನೀಡಲಾಗುತ್ತಿತ್ತು. ಇದೀಗ ಅವರಿಗೆ ನೀಡುವ ಈ ಪರಿಹಾರ ಹಣದ ಪ್ರಮಾಣವನ್ನು 3 ಲಕ್ಷ ರೂ.ನಿಂದ 10 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಅಲ್ಲದೇ ಈ ನಿಯಮ ಕಳೆದ ಜನವರಿ 1ರಿಂದಲೇ ಜಾರಿಗೆ ಬರುವಂತೆ ತಿಳಿಸಲಾಗಿದೆ.
ಇದೇ ತಿಂಗಳು ಫೆಬ್ರವರಿ 04 ರಂದು ಹಾಸನ ವಿಭಾಗದ, ಚನ್ನರಾಯಪಟ್ಟಣ ಘಟಕದ ವಾಹನ ಸಂಖ್ಯೆ ಕೆಎ-13-ಎಫ್-2261 ಈ ಸಂಖ್ಯೆಯ ನಿಗಮದ ಬಸ್ ಬೆಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿತ್ತು. ಈ ವೇಳೆ ಸಕಲೇಶಪುರದ ಸಮೀಪ ಬಾಗೆ ಎಂಬ ಸ್ಥಳದ ತಿರುವಿನಲ್ಲಿ ಅಪಘಾತ ಉಂಟಾಗಿತ್ತು.
ಕುಟುಂಬಕ್ಕೆ ನೆರವು, ಸಾಂತ್ವನ
ಈ ವೇಳೆ ಬಸ್‌ಒಳಗೆ ಇದ್ದ ಪ್ರಯಾಣಿಕ ಜಿ.ಎನ್ ಅಮೃತ (34) ಅವರು ತೀವ್ರ ರಕ್ತಸ್ರಾವ ವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮೃತರ ತಂದೆಯಾದ ಜಿ.ಡಿ ನಾಗರಾಜುರವರಿಗೆ ಇಂದು ರೂಪಾಯಿ 10 ಲಕ್ಷಗಳ ಅಪಘಾತ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.

ಅಪಘಾತಗಳು ಆಕಸ್ಮಿಕವೇ ಆದರೂ ಅದರಿಂದಾಗುವ ಪ್ರಾಣ ಹಾನಿ ಮತ್ತು ಕುಟುಂಬಕ್ಕೆ ಉಂಟಾಗುವ ನಷ್ಟವನ್ನು ಭರಿಸಲು ಅಸಾಧ್ಯ. ಆದರೂ ನಿಗಮವು ಪ್ರಯಾಣಿಕರೆಡೆಗಿನ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಜಾರಿಗೊಳಿಸಿದೆ.
ಇತ್ತೀಚೆಗಷ್ಟೇ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರಾತ್ರಿ ಪಾಳಿಯ ಬಸ್ಸುಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರಿಗೆ ಫ್ಲಾಸ್ಕ್ (ಕಾಪಿ/ಟೀ/ಬಿಸಿನೀರು ಕುಡಿಯಲು ಅನುವಾಗುವಂತೆ) ನೀಡಲಾಗಿದೆ ಎಂದು ತಿಳಿಸಿದರು.
ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರು ಅಪಘಾತಗಳನ್ನು ತಡೆಗಟ್ಟಲು ಸಂಸ್ಥೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಇಲಾಖೆ ವ್ಯವಸ್ಥಾಪಕ ವಿ.ಅನ್ಬುಕುಮಾರ್, ನಿಗಮ ನಿರ್ದೇಶಕಿ ಡಾ. ನಂದಿನಿ ದೇವಿ. ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.












Click it and Unblock the Notifications