KSRTC: ಡೀಸೆಲ್ ಕೊರತೆಯಿಂದ ಡಿಪೋದಲ್ಲೇ ನಿಂತ ಕೆಎಸ್‌ಆರ್‌ಟಿಸಿ ಬಸ್‌ಗಳು: ಡಿಸಿಎಂ ಹೇಳಿದ್ದೇನು ?
KSRTC: ಕೆಎಸ್‌ಆರ್‌ಟಿಸಿ(KSRTC) ಸಾರಿಗೆ ವ್ಯಾಪ್ತಿಯ ಬಸ್‌ಗಳಿಗೆ ಡೀಸೆಲ್ ಕೊರತೆ ಎದುರಾಗಿದೆ ಎನ್ನುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕುಷ್ಟಗಿ ಕೆಎಸ್‌ಆರ್‌ಟಿಸಿ(KSRTC) ಸಾರಿಗೆ ಡಿಪೋಗಳಲ್ಲಿ ಕಳೆದ 2ರಿಂದ 3 ದಿನಗಳಿಂದ ತೀವ್ರ ಡೀಸೆಲ್ ಕೊರತೆ ಎದುರಾಗಿದೆ. ಇದರಿಂದ ನೂರಾರು ಬಸ್‌ಗಳು ಡಿಪೋಗಳಲ್ಲೇ ಸಾಲುಗಟ್ಟಿ ನಿಲ್ಲುವಂತಾಗಿದೆ ಎಂದು ಹೇಳಲಾಗಿದೆ. ಇದರಿಂದ ಈ ಭಾಗದ ಗ್ರಾಮೀಣ ಮತ್ತು ದೂರದ ಊರುಗಳಿಗೆ ಹೋಗುವವರಿಗೆ ಸಮಸ್ಯೆ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.
ಡೀಸೆಲ್ ಕೊರತೆಯಿಂದ ಬಸ್ ಸಂಚಾರ ಸ್ಥಗಿತವಾದರೆ ತಕ್ಷಣ ಸರಿಪಡಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಕರ್ನಾಟಕದ ಸಾರಿಗೆ ಘಟಕಗಳಲ್ಲಿ ಡೀಸೆಲ್ ಖಾಲಿಯಾಗಿದ್ದು, ಬಾಕಿ ಹಣ ಪಾವತಿಯಾಗದ ಕಾರಣ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಇದು ತಾತ್ಕಾಲಿಕ ಸಮಸ್ಯೆಯಾಗಿರಬಹುದು. ಅದನ್ನು ತಕ್ಷಣ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರ ನಡೆಸುವಾಗ ವಿವಿಧ ಇಲಾಖೆಗಳಿಗೆ ಹಣ ಒದಗಿಸುವುದು, ಆದಾಯ ಸಂಗ್ರಹಿಸುವುದು ಮತ್ತು ಎಲ್ಲ ಯೋಜನೆಗಳನ್ನು ನಿರ್ವಹಿಸುವುದು ಅಗತ್ಯ. ಅಬಕಾರಿ, ನೋಂದಣಿ ಮತ್ತು ವಾಣಿಜ್ಯ ತೆರಿಗೆ ಸೇರಿದಂತೆ ವಿವಿಧ ಮೂಲಗಳಿಂದ ಆದಾಯ ಸಂಗ್ರಹಿಸಿ ಸರ್ಕಾರ ಹಣಕಾಸು ನಿರ್ವಹಣೆ ಮಾಡುತ್ತದೆ. ಯಾವುದಾದರೂ ಒಂದು ಕ್ಷೇತ್ರದಲ್ಲಿ ತಾತ್ಕಾಲಿಕ ವಿಳಂಬ ಉಂಟಾದರೆ ಅದನ್ನು ಸರಿಪಡಿಸಲಾಗುವುದು. ಸರ್ಕಾರ ಯಾವುದೇ ಯೋಜನೆಯನ್ನು ನಿಲ್ಲಿಸಿಲ್ಲ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಆರ್ಥಿಕ ಕೊರತೆ ಉಂಟಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು. ಗ್ಯಾರಂಟಿಗಳಿಂದ ಆರ್ಥಿಕ ಸಮಸ್ಯೆ ಉಂಟಾಗಿದ್ದರೆ ಸರ್ಕಾರ ಯಾವುದಾದರೂ ಒಂದು ಯೋಜನೆಯನ್ನು ನಿಲ್ಲಿಸಬಹುದಿತ್ತು. ಆದರೆ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ₹52,000 ಕೋಟಿ ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಿದ್ದು, ಈಗಲೂ ಯೋಜನೆಗಳನ್ನು ಮುಂದುವರಿಸುತ್ತಿದೆ ಎಂದರು.
ಸಿದ್ದರಾಮಯ್ಯ ಅವರು ಸುಮಾರು 16 ಬಜೆಟ್‌ಗಳನ್ನು ಮಂಡಿಸಿದ್ದು, ರಾಜ್ಯದಲ್ಲಿ ಹಣಕಾಸಿನ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಕರ್ನಾಟಕ ಸರ್ಕಾರವೂ ಹಣಕಾಸಿನ ಶಿಸ್ತಿನೊಂದಿಗೆ ಆಡಳಿತ ನಡೆಸುತ್ತಿದೆ. ಇತರ ರಾಜ್ಯಗಳ ಪರಿಸ್ಥಿತಿಗೆ ಹೋಲಿಸಿದರೆ ರಾಜ್ಯದಲ್ಲಿ ಹಣಕಾಸಿನ ನಿರ್ವಹಣೆ ಸಮರ್ಪಕವಾಗಿದೆ. ಆದ್ದರಿಂದ ಗ್ಯಾರಂಟಿ ಯೋಜನೆಗಳಿಂದಲೇ ಆರ್ಥಿಕ ತೊಂದರೆ ಉಂಟಾಗಿದೆ ಎಂಬ ಆರೋಪ ಸರಿಯಲ್ಲ ಎಂದು ಡಾ.ಜಿ.ಪರಮೇಶ್ವರ ಹೇಳಿದರು.
ರೈತರ ನೆರವಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ
ಬರ ಪರಿಸ್ಥಿತಿಯ ನಡುವೆಯೂ ರೈತರಿಗೆ ನೆರವು ನೀಡುವುದರಲ್ಲಿ ಸರ್ಕಾರ ಹಿಂದೆ ಸರಿಯುವುದಿಲ್ಲ. ಬೆಳೆ ಪರಿಹಾರ, ವಿಮೆ, ಸಾಲ ಮರುಪಾವತಿಗೆ ಕಾಲಾವಕಾಶ, ಬಡ್ಡಿ ಪಾವತಿ ಹಾಗೂ ಇತರ ಸೌಲಭ್ಯಗಳ ಮೂಲಕ ರೈತರನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ರೈತರ ಸಂಕಷ್ಟವನ್ನು ನಿವಾರಿಸಲು ಕೇಂದ್ರ ಸರ್ಕಾರವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ರಾಜ್ಯ ಸರ್ಕಾರ ಈಗಾಗಲೇ ಮೊದಲ ಕಂತಿನ ಪರಿಹಾರ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರದಿಂದ ನೆರವು ಪಡೆದು ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ಬರ ನಿರ್ವಹಣೆಯ ಸಂದರ್ಭದಲ್ಲಿ ರಾಜಕೀಯಕ್ಕಿಂತ ರೈತರ ಬದುಕು ಮುಖ್ಯವಾಗಬೇಕು ಎಂದು ಅವರು ಹೇಳಿದರು.


Click it and Unblock the Notifications
