KSRTC Tour Package: ಕೊಲ್ಲೂರು, ಸಿಗಂದೂರು, ಮಡಿಕೇರಿಗೆ ಭಾರೀ ಬೇಡಿಕೆ! ಒಂದೇ ದಿನ ದಾಖಲೆ
ಮಂಗಳೂರು: ದಸರಾ ಸಂಭ್ರಮ ರಾಜಾದ್ಯಂತ ಮನೆ ಮಾಡಿದ್ದು, ಅದ್ಧೂರಿ ಆಚರಣೆ ನಡೆಯುತ್ತಿವೆ. ಹಬ್ಬದ ಹಿನ್ನೆಲೆ ಶಾಲಾ ಮಕ್ಕಳಿಗೆ ರಜೆ ಹಿನ್ನೆಲೆ ಪ್ರವಾಸಿ ತಾಣಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದಾರೆ. ಮಂಗಳೂರಿನಿಂದ ಕೆಎಸ್‌ಆರ್‌ಟಿಸಿ (KSRTC) ವಿಶೇಷ ದಸರಾ ಪ್ರವಾಸ ಪ್ಯಾಕೇಜ್ ನಡಿ ಒಂದೇ ದಿನ ಅತ್ಯಧಿಕ ಬಸ್‌ಗಳು ಸಂಚಾರ ಮಾಡಿವೆ. ಈ ಹಿಂದಿನ 5 ವರ್ಷಗಳಿಗೆ ಹೋಲಿಕೆ ಮಾಡಿದರೆ ಭಾನುವಾರ ವಿವಿಧ ದೇಗುಲ ರೂಟ್‌ಗಳಲ್ಲಿ ಒಟ್ಟು 29 ಬಸ್‌ಗಳು ಸಂಚಾರ ಮಾಡಿವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವಿಭಾಗೀಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ದಸರಾ ಆರಂಭವಾಗುತ್ತಿದ್ದಂತೆ ವಿವಿಧ ದೇವಸ್ಥಾನಗಳಿಗೆ ಪ್ರವಾಸ ಪ್ಯಾಕೇಜ್ ಘೋಷಿಸಲಾಗಿತ್ತು. ಆಗ 18ರಷ್ಟು ಓಡಾಡುತ್ತಿದ್ದ ಬಸ್‌ಗಳು ನೆನ್ನೆ ಭಾನುವಾರ (ಅಕ್ಟೋಬರ್ 18) ರಂದು ಬರೋಬ್ಬರಿ 29 ಕ್ಕೆ ಹೆಚ್ಚಾಗಿದೆ.

ಭಾನುವಾರ ದೇವಾಲಯಗಳಿಗೆ ಅಧಿಕ ಜನರ ಭೇಟಿ
ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ದೇವಾಲಯಗಳಿಗೆ ಬಸ್ ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಪೈಕಿ ಭಾನುವಾರ ಒಂದೇ ದಿನ ಕೊಲ್ಲೂರು, ಸಿಗಂದೂರು ಮತ್ತು ಮಡಿಕೇರಿ ಮಾರ್ಗಗಳಿಗೆ ಹೆಚ್ಚು ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಅಧಿಕ ಬಸ್‌ಗಳು ಓಡಾಡಿದವು ಎಂದು 'ToI' ವರದಿ ಮಾಡಿದೆ.
ಕಳೆದ ಐದು ವರ್ಷಗಳಿಂದ ದಸರಾ ವೇಳೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿಕೊಂಡು ಬರಲಾಗುತ್ತಿದೆ. ಇದರಡಿ ಈ ವರ್ಷ ನೆನ್ನೆ ಓಡಾಡಿದ ಬಸ್‌ಗಳು ಬಹುತೇಕ ಫುಲ್ ಆಗಿದ್ದವು. ಎಲ್ಲ ಮಾರ್ಗಗಳಲ್ಲಿ ಇಡೀ ದಿನ ಹೆಚ್ಚಿನ ಪ್ರವಾಸಿಗರು ಕಂಡ ಬಂದರು. ಒಟ್ಟು 29 ಬಸ್‌ಗಳಲ್ಲಿ ಪೈಕಿ 2 ಬಸ್‌ಗಳು ಉಡುಪಿಯಿಂದ ಮತ್ತು ಉಳಿದ 27 ಬಸ್‌ಗಳು ಮಂಗಳೂರಿನಿಂದ ಪ್ರಯಾಣಿಸಿದವು. ಇವುಗಳಲ್ಲಿ ಒಟ್ಟು ಸುಮಾರು 1,400 ಪ್ರಯಾಣಿಕರು ಪ್ರಯಾಣಿಸಿದ್ದಾರೆಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 11 ರಿಂದ 20 ರವರೆಗೆ ಬಸ್ ಲಭ್ಯ
ಮಂಗಳೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಅಕ್ಟೋಬರ್ 11 ರಿಂದ 20 ರವರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಬಸ್‌ಗಳು ನವದುರ್ಗಾ ದೇವಾಲಯಗಳು, ತಲಕಾವೇರಿ-ಭಾಗಮಂಡಲ, ಕೊಲ್ಲೂರು, ಸಿಗಂದೂರು, ಶೃಂಗೇರಿ ಹಾಗೂ ಮಡಿಕೇರಿ ವ್ಯಾಪ್ತಿಯ ದೇವಾಲಯಗಳನ್ನು ಪ್ರವಾಸಿಗರಿಗೆ ತೋರಿಸಿಕೊಂಡು ಬರುತ್ತಿವೆ. ಯಾವುದೇ ಮಾರ್ಗದಲ್ಲಿ ಸಂಚಾರ ಮಾಡಿದರೂ ಬೆಳಗ್ಗೆ ಹೋಗಿ ಸಂಜೆ, ಕೆಲವು ಬಸ್‌ಗಳು ರಾತ್ರಿ ಮಂಗಳೂರು ಬಸ್ ನಿಲ್ದಾಣಕ್ಕೆ ಮರಳುತ್ತವೆ.
ಉಡುಪಿಯಿಂದ ಒಂದು ಬಸ್ ಸ್ಥಳೀಯ ಪ್ಯಾಕೇಜ್ ಪ್ರವಾಸಕ್ಕೂ, ಮತ್ತೊಂದು ಬಸ್ ಕೊಲ್ಲೂರು ಮಾರ್ಗಕ್ಕೂ ಸಂಚರಿಸಿತು. ಈ ಹಬ್ಬದ ಸನ್ನಿವೇಶದಲ್ಲಿ ಕೊಲ್ಲೂರು, ಸಿಗಂದೂರು ಮತ್ತು ಮಡಿಕೇರಿ ಮಾರ್ಗಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಬಸ್‌ಗಳ ಸಂಚಾರ ಏರಿಕೆ ಆಗಿದ್ದು ಕಂಡು ಬಂತು ಎಂದು ಅಧಿಕಾರಿಗಳು ಹೇಳಿದರು.


Click it and Unblock the Notifications
