ನಂಜನಗೂಡು ಬಳಿ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿ; 44 ಪ್ರಯಾಣಿಕರು ಪಾರಾಗಿದ್ದೇ ರೋಚಕ
ಮೈಸೂರು: ನಂಜನಗೂಡು ಸಮೀಪ ಬೆಳ್ಳಂಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ. ಶುಕ್ರವಾರ ಈ ಘಟನೆ ಸಂಭವಿಸಿದ್ದು, ಭಾರೀ ಆತಂಕ ಸೃಷ್ಟಿಯಾಯಿತು. ಬೆಂಗಳೂರು-ಕೋಜಿಕೋಡ್ ಮಾರ್ಗವಾಗಿ ಮೈಸೂರಿನಿಂದ ಕೇರಳ ಕಡೆಗೆ ಸಂಚರಿಸುತ್ತಿದ್ದ ಈ ಬಸ್ ನಸುಕಿನ ಜಾವ 2 ಗಂಟೆ ಸುಮಾರಿಗೆ ಈ ಅವಘಡಕ್ಕೆ ಒಳಗಾಯಿತು. ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರದಿಗಳ ಪ್ರಕಾರ ಬಸ್‌ನ ಮುಂಭಾಗದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಕಾಣಿಸಿಕೊಂಡ ಕೂಡಲೇ ಚಾಲಕ ತಕ್ಷಣ ಎಚ್ಚೆತ್ತುಕೊಂಡು ಬಸ್ ಅನ್ನು ರಸ್ತೆಯ ಬದಿಗೆ ನಿಲ್ಲಿಸಿದರು. ಚಾಲಕ ಮತ್ತು ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಪ್ರಯಾಣಿಕರನ್ನು ತಕ್ಷಣ ಬಸ್‌ನಿಂದ ಕೆಳಗಿಳಿಸಿದರು. ಕೆಲವೇ ಕ್ಷಣಗಳಲ್ಲಿ ಬೆಂಕಿ ಸಂಪೂರ್ಣ ಬಸ್‌ಗೆ ವ್ಯಾಪಿಸಿ, ಬೆಂಕಿಗಾಹುತಿಯಾಯಿತು.

ನಿದ್ರೆಗೆ ಜಾರಿದ್ದ ಪ್ರಯಾಣಿಕರು
ಮುಂಜಾನೆ ನಂಜನಗೂಡು ಬಳಿಯ ಪ್ರತ್ಯೇಕ ಪ್ರದೇಶದಲ್ಲಿ ಬಸ್ ಬೆಂಕಿಗೆ ಆಹುತಿಯಾದ ನಂತರ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಸಕಾಲಿಕ ಜಾಗರೂಕತೆಯಿಂದ 44 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರು. ಈ ಬಸ್ ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಬಸ್ ಹೊರಟು ಮೈಸೂರು ಮತ್ತು ನಂಜನಗೂಡು ನಡುವೆ ಪ್ರಯಾಣಿಸುವಾಗ ಹೊಗೆ ಕಾಣಿಸಿಕೊಂಡಿದ್ದನ್ನು ಗಮನಿಸಿದ ಚಾಲಕ ತಕ್ಷಣ ವಾಹನ ನಿಲ್ಲಿಸಿದರು. ಆ ಸಮಯದಲ್ಲಿ ನಿದ್ರೆಗೆ ಜಾರಿದ್ದ ಪ್ರಯಾಣಿಕರನ್ನು ಕೂಡಲೇ ಎಚ್ಚರಗೊಳಿಸಿ ತಕ್ಷಣವೇ ಕೆಳಗಿಳಿಯುವಂತೆ ಹೇಳಲಾಯಿತು. ಈ ವೇಳೆ ಕೆಲ ಪ್ರಯಾಣಿಕರು ತಮ್ಮ ಲಗೇಜ್ ಹೊರತರಲು ಪರದಾಡಿದರು. ಕೊನೆಗೆ ಅದು ಸಾಧ್ಯವಾಗದಿದ್ದಾಗ ಬಸ್‌ನಿಂದ ಹೊರಗೆ ಇಳಿದು ಜೀವ ಉಳಿಸಿಕೊಂಡರು.
ಈ ಘಟನೆ ನಡೆದ ಜಾಗದಲ್ಲಿ ಯಾವುದೇ ಮನೆಗಳು ಅಥವಾ ಅಂಗಡಿಗಳಿರಲಿಲ್ಲ. ನಿರ್ಜನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಬಸ್ ಕೋಜಿಕ್ಕೋಡ್ ಡಿಪೋಗೆ ಸೇರಿದ್ದು ಎಂದು ತಿಳಿದುಬಂದಿದೆ. ನಿರ್ಜನ ಪ್ರದೇಶದಲದಲ್ಲಿ ಬೆಂಕಿ ನಂದಿಸಲು ಯಾವುದೇ ಸೌಲಭ್ಯಗಳು ಇರಲಿಲ್ಲ. ಹೀಗಾಗಿ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ನಮಗೆ ಪ್ರಯಾಣಿಕರ ಸುರಕ್ಷತೆ ಮುಖ್ಯವಾಗಿತ್ತು. ಅಂತಿಮವಾಗಿ ಬಸ್ ಸುಟ್ಟು ಕರಕಲಾಯಿತು. ಬೆಂಕಿಗೆ ಕಾರಣವೇನೆಂದು ತಿಳಿಯಲು ತನಿಖೆ ಆರಂಭಿಸಲಾಗಿದೆ ಎಂದು ಕೋಝಿಕ್ಕೋಡ್‌ನ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಪಾಸ್‌ಪೋರ್ಟ್, ಮೊಬೈಲ್ ಹಾನಿ
ಈ ಘಟನೆಯಿಂದ ಹಲವಾರು ಪ್ರಯಾಣಿಕರು ತಮ್ಮ ಪಾಸ್‌ಪೋರ್ಟ್‌ಗಳು, ಮೊಬೈಲ್ ಫೋನ್‌ಗಳು, ಬ್ಯಾಗ್, ಬಟ್ಟೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ನಂತರ ಅವರು ಬೇರೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೋಜಿಕ್ಕೋಡ್‌ಗೆ ಪ್ರಯಾಣಿಸಿ ತಮ್ಮ ಸ್ಥಳ ತಲುಪಿದರು.ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ವರದಿಯಾಗಿಲ್ಲ ಎಂದು ಪೊಲೀಸರು, ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ತೀವ್ರವಾಗಿ ವ್ಯಾಪಿಸಿದ್ದರಿಂದ ಹಲವಾರು ಪ್ರಯಾಣಿಕರು ತಮ್ಮ ವೈಯಕ್ತಿಕ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಘಟನೆಯ ಕಾರಣವನ್ನು ತಿಳಿಯಲು ಅಗ್ನಿಶಾಮಕ ದಳ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ತನಿಖೆ ಮುಂದುವರೆದಿದೆ.












Click it and Unblock the Notifications