ಹೈಕೋರ್ಟ್ ಮೆಟ್ಟಿಲೇರಿದ ಕೆಎಸ್‌ಒಯು ಕುಲಪತಿ ಅವಧಿ ವಿಸ್ತರಣೆ ವಿವಾದ
ಬೆಂಗಳೂರು ಜೂ.3. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಕುಲಪತಿ ಎಸ್.ವಿದ್ಯಾಶಂಕರ್ ಅವರ ಅವಧಿಯ ಒಂದು ವರ್ಷ ವಿಸ್ತರಣೆ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ವಿದ್ಯಾಶಂಕರ್ ಅವಧಿ ವಿಸ್ತರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದರ ನಡುವೆಯೇ ವಿಷಯ ಕೋರ್ಟ್ ಮೆಟ್ಟಿಲೇರಿರುವುದು ಹೊಸ ತಿರುವಿಗೆ ಕಾರಣವಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಯೋಜನೆ, ನಿಗಾ ಮತ್ತು ಮೌಲ್ಯಮಾಪನ ಮಂಡಳಿಯ ಸದಸ್ಯ ಹಾಗೂ ರಾಜ್ಯ ಒಕ್ಕಲಿಗರ ಸಂಘದ (ಆರ್‌ವಿಎಸ್) ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ಮಹದೇವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ವಿದ್ಯಾಶಂಕರ್ ಅವರ ಅವಧಿಯನ್ನು 2022ರ ಮೇ 30ರಿಂದ ಒಂದು ವರ್ಷದಿಂದ ಅವರ ಸೇವಾವಧಿಯನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಲಾಗಿದೆ. ಹಾಗಾಗಿ ಅವರನ್ನು ಪ್ರತಿವಾದಿಯನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೂ ನೋಟಿಸ್ ಜಾರಿ ಮಾಡಲು ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು, ವಿದ್ಯಾಶಂಕರ್ ಕಳೆದ ಮೂರು ವರ್ಷಗಳಲ್ಲಿ ಕೆಎಸ್‌ಒಯು ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಮತ್ತು ಹಲವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಲವಾರು ಅಕ್ರಮಗಳನ್ನು ತಡೆಗಟ್ಟಲು ಕುಲಪತಿ ಮತ್ತು ರಾಜ್ಯ ಸರ್ಕಾರ ಇಬ್ಬರೂ ವಿಫಲರಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಲ್ಲದೆ, ಅರ್ಜಿದಾರರು ಮತ್ತು ಇತರ ಪ್ರಮುಖ ವ್ಯಕ್ತಿಗಳು ಸಲ್ಲಿಸಿದ ಮನವಿಗಳನ್ನು ಪರಿಗಣಿಸದೆ, ಕುಲಪತಿಗಳಿಗೆ ಒಂದು ವರ್ಷದ ವಿಸ್ತರಣೆಯನ್ನು ನೀಡುವ ಮೂಲಕ ಸರ್ಕಾರ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಅರ್ಜಿದಾರರು, ಆರ್‌ವಿಎಸ್ ನಡೆಸುತ್ತಿರುವ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ವಿದ್ಯಾಶಂಕರ್ ಅವರನ್ನು 2019 ರಲ್ಲಿ ಬಿಐಟಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅವ್ಯವಹಾರದ ಆರೋಪ ಎದುರಿಸುತ್ತಿದ್ದರೂ ಅವರನ್ನು ಕುಲಪತಿಯನ್ನಾಗಿ ನೇಮಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.












Click it and Unblock the Notifications