ಡ್ಯಾಂಗಳ ಭದ್ರತೆಯಿಂದ KSISF ಪಡೆಗಳು ವಾಪಸ್!
ಬೆಂಗಳೂರು, ಫೆಬ್ರವರಿ 09: ಕರ್ನಾಟಕದ ಗೃಹ ಇಲಾಖೆ ಡ್ಯಾಂಗಳ ಭದ್ರತಾ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಇನ್ನು ಮುಂದೆ ಅಣೆಕಟ್ಟುಗಳ ಭದ್ರತೆಯ ಜವಾಬ್ದಾರಿಯನ್ನು ಕೆಎಸ್‌ಐಎಸ್‌ಎಫ್ ನೋಡಿಕೊಳ್ಳುವುದಿಲ್ಲ. ಸ್ಥಳೀಯ ಪೊಲೀಸರೇ ನೋಡಿಕೊಳ್ಳುತ್ತಾರೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF) ಇದೆ. ರಾಜ್ಯದ ಪ್ರಮುಖ ಜಲಾಶಯಗಳು, ಸೂಕ್ಷ್ಮ ಪ್ರದೇಶಗಳ ಭದ್ರತೆಗೆ ಈ ಪಡೆಯನ್ನು ನಿಯೋಜನೆ ಮಾಡಲಾಗಿತ್ತು.

ಆದರೆ ಈಗ ಗೃಹ ಇಲಾಖೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಡ್ಯಾಂಗಳ ಭದ್ರತಾ ಕಾರ್ಯಗಳಿಂದ ವಾಪಸ್ ಪಡೆಯುತ್ತಿದೆ. ಇನ್ನು ಮುಂದೆ ಸ್ಥಳೀಯ ಜಿಲ್ಲಾ ಪೊಲೀಸರು ಅಥವ ಕಮಿಷನರೇಟ್ ವತಿಯಿಂದ ಡ್ಯಾಂ ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಭದ್ರತೆ ನೀಡಲಾಗುತ್ತದೆ.
ವಿಮಾನ ನಿಲ್ದಾಣಗಳಿಗೆ ನಿಯೋಜನೆ; ಕರ್ನಾಟಕದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ವಿಮಾನ ನಿಲ್ದಾಣಗಳ ಭದ್ರತೆಗೆ ಹೆಚ್ಚಿನ ಗಮನ ಅಗತ್ಯ. ಆದ್ದರಿಂದ ಗೃಹ ಇಲಾಖೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ರಾಜ್ಯದ ವಿಮಾನ ನಿಲ್ದಾಣಗಳ ಭದ್ರತೆಗೆ ನಿಯೋಜಿಸುತ್ತಿದೆ.
ಶಿವಮೊಗ್ಗ ವಿಮಾನ ನಿಲ್ದಾಣ 2023ರ ಫೆಬ್ರವರಿಯಲ್ಲಿ ಲೋಕಾರ್ಪಣೆಯಾಗಿದೆ. ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸಿದ್ಧವಾಗಿದೆ. ಈ ಎಲ್ಲಾ ವಿಮಾನ ನಿಲ್ದಾಣಗಳ ಭದ್ರತೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ ವಹಿಸಲಾಗುತ್ತದೆ. ಆದ್ದರಿಂದ ಡ್ಯಾಂ ಸೇರಿದಂತೆ ಸೂಕ್ಷ್ಮ ಪ್ರದೇಶದಿಂದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
ಮೈಸೂರು ನಗರದಲ್ಲಿರುವ ಕೆಪಿಎ, ಜಿಲ್ಲೆಯಲ್ಲಿರುವ ತಾರಕ, ನುಗು, ಗೇರುಸೊಪ್ಪ ಡ್ಯಾಂ, ವಿದ್ಯುತ್ ಉತ್ಪಾದನಾ ಘಟಕ, ಶಿವನಸಮುದ್ರ ಜಲವಿದ್ಯುತ್ ಕೇಂದ್ರ, ನಾರಾಯಣ ಪುರ ಡ್ಯಾಂ ಹೀಗೆ ವಿವಿಧ ಕಡೆ ಭದ್ರತೆಗೆ ನಿಯೋಜನೆಗೊಂಡಿದ್ದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿ/ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಫೆಬ್ರವರಿ 15ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ವಿಮಾನ ನಿಲ್ದಾಣ, ವಿಧಾನಸೌಧ, ರಾಜಭವನ, ಹೈಕೋರ್ಟ್, ಅರಮನೆ, ನಮ್ಮ ಮೆಟ್ರೋ ನಿಲ್ದಾಣ, ಡ್ಯಾಂ, ಕಾರಾಗೃಹ ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಭದ್ರತೆಗೆ ನಿಯೋಜನೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಈಗ ವಿಮಾನ ನಿಲ್ದಾಣದ ಭದ್ರತೆಗೆ ಮಾತ್ರ ನಿಯೋಜಿಸಲಾಗುತ್ತಿದೆ.
ಸಿಬ್ಬಂದಿಯ ಕೊರತೆಯನ್ನು ಸಹ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಎದುರಿಸುತ್ತಿದೆ. ಸುಮಾರು 1 ಸಾವಿರ ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಅದಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಇರುವ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡವಿದ್ದು, ಎಲ್ಲಾ ಕಡೆ ಭದ್ರತೆ ನೀಡುವುದು ಕಷ್ಟವಾಗಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಮಾದರಿಯಲ್ಲಿ 2012ರಲ್ಲಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಆರಂಭಿಸಲಾಯಿತು. ಮೊದಲ ಹಂತದಲ್ಲಿ 139 ಸಬ್ ಇನ್ಸ್‌ಪೆಕ್ಟರ್, 1731 ಕಾನ್ಸ್‌ಟೇಬಲ್ ನೇಮಕಾತಿ ಆಗಿತ್ತು. ಸಿಬ್ಬಂದಿಗಳಿಗೆ ಹೈದರಾಬಾದ್‌ನ ಸಿಐಎಸ್‌ಎಫ್ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು.
ಕಾನ್ಸ್‌ಟೇಬಲ್‌ಗಳ 8 ತುಕಡಿಗಳಿಗೆ ಕರ್ನಾಟಕದ ಪೊಲೀಸ್ ತರಬೇತಿ ಶಾಲೆಗಳಿರುವ ಕಲಬುರಗಿ, ಮೈಸೂರು, ಚನ್ನಪಟ್ಟಣ, ಖಾನಾಪುರದಲ್ಲಿ ತರಬೇತಿ ನೀಡಲಾಗಿತ್ತು. ಭಯೋತ್ಪಾದಕರು, ನಕ್ಸಲರು ದಾಳಿ ಮಾಡಿದರೆ ತಡೆಯವ ಮಾದರಿಯಲ್ಲಿ ಸಿಬ್ಬಂದಿಗಳಿಗೆ ತರಬೇತಿ ಕೊಡಿಸಲಾಗಿತ್ತು.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಎಕೆ 47, ಎಸ್‌ಎಲ್ಆರ್ ಶಸ್ತ್ರಾಸ್ತ್ರಗಳು, ಬಾಂಬ್ ನಿಷ್ಕ್ರೀಯ ತರಬೇತಿ ಸೇರಿದಂತೆ ಆಧುನಿಕ ಉಪಕರಣಗಳ ಬಳಕೆಯ ಬಗ್ಗೆ ತರಬೇತಿ ಪಡೆದಿದ್ದರು. ಆದ್ದರಿಂದ ಇವರನ್ನು ಸೂಕ್ಷ್ಮ ಪ್ರದೇಶಗಳ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Karnataka Polic: ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ನಾವು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ: ಡಾ.ಜಿ ಪರಮೇಶ್ವರ್ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ












Click it and Unblock the Notifications