KSET exam: ಕೆ-ಸೆಟ್ ಪರೀಕ್ಷೆ ವೇಳೆ ಮೂಗುತಿ, ಕಿವಿಯೋಲೆ ತೆರವು: ಯತ್ನಾಳ್ ಖಂಡನೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಭಾನುವಾರ ಕೆ-ಸೆಟ್ ಪರೀಕ್ಷೆ ನಡೆಸಿದೆ. ಈ ವೇಳೆ ಪರೀಕ್ಷಾ ಕೇಂದ್ರಗಳಲ್ಲಿ ಹೆಣ್ಣುಮಕ್ಕಳ ಕಿವಿಯೋಲೆ, ಮೂಗುತಿ ತೆರವು ಮಾಡಿರುವುದಕ್ಕೆ ಭಾರೀ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಕ್ರೋಶ ಹೊರಹಾಕಿದ್ದಾರೆ. ಪರೀಕ್ಷೆಯಲ್ಲಿ ನಕಲು ತಡೆಯುವ ಭರದಲ್ಲಿ ಹೆಣ್ಣು ಮಕ್ಕಳ ಕಿವಿಯೋಲೆ, ಮೂಗುತಿಯನ್ನು ಬಿಚ್ಚಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕ್ರಮ ಅತಾರ್ಕಿಕ, ಅಮಾನವೀಯ ಹಾಗೂ ಹಿಂದೂ ವಿರೋಧಿ ನಿಲುವು ಎಂದು ಆರೋಪ ಮಾಡಿದ್ದಾರೆ.
ಮೂಗುತಿ ಹಾಗೂ ಕಿವಿಯೋಲೆ ಬಿಚ್ಚಿಸಿವುದರಿಂದ ನಕಲು ತಡೆಯಬಹುದು ಎಂದು ಪರೀಕ್ಷಾ ಪ್ರಾಧಿಕಾರ ತಿಳಿದಿದ್ದರೆ, ಅದು ಮೂರ್ಖತನದ ಪರಮಾವಾಧಿಯಷ್ಟೇ. ತಂತ್ರಜ್ಞಾನ, ಸಿಸಿಟಿವಿ ಕ್ಯಾಮೆರಾಗಳನ್ನೂ ಉಪಯೋಗಿಸಿ ಪರೀಕ್ಷೆಯಲ್ಲಿ ನಕಲು, ಅಕ್ರಮ ಆಗದಂತೆ ನೋಡಿಕೊಳ್ಳಬೇಕೇ ಹೊರತು, ಈ ರೀತಿಯಾದ ಅವೈಜ್ಞಾನಿಕ ಕ್ರಮಗಳಿಂದ ಸಾಧ್ಯವಿಲ್ಲ ಎಂದು ಖಂಡಿಸಿದ್ದಾರೆ. ಈ ರೀತಿಯಾದ ಅವೈಜ್ಞಾನಿಕ, ಅತಾರ್ಕಿಕ ನಿರ್ಧಾರಗಳನ್ನು ಪರೀಕ್ಷಾ ಪ್ರಾಧಿಕಾರ ಕೈಗೊಂಡರೆ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡುತ್ತೇನೆ. ಅಷ್ಟಕ್ಕೂ, ಕಿವಿಯೋಲೆ ಹಾಗೂ ಮೂಗುತಿಯಲ್ಲಿ ಏನನ್ನು ಅಡಗಿಸಿಕೊಳ್ಳಬಹುದು ಎಂಬುದನ್ನು ಪ್ರಾಧಿಕಾರ ಸ್ಪಷ್ಟೀಕರಿಸಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

ಬಳ್ಳಾರಿಯಲ್ಲೂ ಕೆ-ಸೆಟ್ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ ಸೇರಿದಂತೆ ಮೈಮೇಲೆ ಧರಿಸಿದ್ದ ದೇವರ ದಾರವನ್ನು ಸಹ ಬಿಚ್ಚಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಕಳುಹಿಸಿರುವ ಘಟನೆ ನಡೆದಿದೆ. ಪರೀಕ್ಷಾ ಸಿಬ್ಬಂದಿಯ ಈ ನಡೆಗೆ ಪರೀಕ್ಷಾರ್ಥಿಗಳು ಅಸಮಾಧಾನ ಹೊರಹಾಕಿದ್ದು, ಅನಿವಾರ್ಯವಾಗಿ ಪರೀಕ್ಷೆ ಬರೆಯಬೇಕೆಂದು ಸುಮ್ಮನಾಗಿದ್ದಾರೆ.
ಕೆಇಎ ಹೇಳಿದ್ದೇನು?
ಈ ಬಾರಿಯೂ ಮುಖಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುತ್ತದೆ. ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ. ಈ ಹಿಂದಿನ ಎಲ್ಲ ಪರೀಕ್ಷೆಗಳ ಹಾಗೆಯೇ ಈ ಪರೀಕ್ಷೆಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೆಇಎ ಹೇಳಿತ್ತು.
ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಪರೀಕ್ಷೆಗಳು ನಡೆಯಲಿದ್ದು, ಒಮ್ಮೆಗೇ ಎರಡೂ ಪತ್ರಿಕೆಗಳ (ಪತ್ರಿಕೆ 1 & 2) ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮೂರು ಗಂಟೆ ಅವಧಿಯಲ್ಲಿ 100 ಅಂಕಗಳ ಸಾಮಾನ್ಯ ಜ್ಞಾನ ಮತ್ತು 200 ಅಂಕಗಳ ವಿಷಯವಾರು ಪತ್ರಿಕೆಗಳಿಗೆ ಉತ್ತರಿಸಬೇಕಾಗುತ್ತದೆ. ಎರಡೂ ಪತ್ರಿಕೆಗಳಿಗೆ ಪ್ರತ್ಯೇಕ ಓಎಂಆರ್ ನೀಡುತ್ತಿದ್ದು, ಆಯಾಯ ಓಎಂಆರ್ ನಲ್ಲೇ ಅದರ ಉತ್ತರಗಳನ್ನು ಎಚ್ಚರಿಕೆಯಿಂದ ದಾಖಲಿಸಬೇಕು.
ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಭಾನುವಾರ ರಾಜ್ಯದ 11 ಜಿಲ್ಲೆಗಳಲ್ಲಿ ಸುಗಮವಾಗಿ ನಡೆಯಿತು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಒಟ್ಟು 34 ವಿಷಯಗಳಿಗೆ ನಡೆದ ಕೆ-ಸೆಟ್ ಪರೀಕ್ಷೆಗೆ 1.34 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ 1.21 ಲಕ್ಷ ಅಂದರೆ ಶೇ 90ರಷ್ಟು ಮಂದಿ ಹಾಜರಾಗಿದ್ದರು. ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಜಿಲ್ಲೆಗಳ 316 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು ಎಂದು ಹೇಳಿದೆ.
ಪರೀಕ್ಷಾ ಕೇಂದ್ರಗಳಿಂದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳು ಕೆಇಎ ಕಚೇರಿಗೆ ಬಂದ ತಕ್ಷಣವೇ ಅವುಗಳನ್ನು ಸ್ಕ್ಯಾನ್ ಮಾಡಿ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಕೆಲಸ ಕೂಡ ಸಂಜೆ ವೇಳೆಗೆ ಆರಂಭಿಸಲಾಯಿತು. ಎಲ್ಲ ವಿಷಯಗಳ ಕೀ ಉತ್ತರಗಳನ್ನು ಕೂಡ ಈ ವಾರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.












Click it and Unblock the Notifications