ಯಾರಿಗೆ ಮತ ಹಾಕಬೇಕು ಎನ್ನುವ ಬಗ್ಗೆ ಕೆ.ಎಸ್ ಈಶ್ವರಪ್ಪ ಅಚ್ಚರಿಯ ಹೇಳಿಕೆ!
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ನವೆಂಬರ್ 13)ರಂದು ಭರ್ಜರಿ ಮತದಾನ ನಡೆಯುತ್ತಿದೆ. ಈ ನಡುವೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಮತದಾರರಿಗೆ ಮಾರ್ಮಿಕವಾಗಿ ಸಲಹೆ ನೀಡಿದ್ದಾರೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದನ ಪೈಪೋಟಿ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಎಲ್ಲರೂ ಬಿರುಸಿನ ಮತದಾನ ಮಾಡುತ್ತಿದ್ದಾರೆ. ಬಿಜೆಪಿಯ ಮಾಜಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ಮತದಾರರಿಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ.
ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಯಿಂದ ಹೊರನಡೆದಿದ್ದು. ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಧಿಕಾರದಲ್ಲಿ ಇರುವವರೆಗೂ ನಾನು ಮರಳಿ ಬಿಜೆಪಿಗೆ ಬರುವುದಿಲ್ಲ. ಅಪ್ಪ ಮಕ್ಕಳು ಇಬ್ಬರು ಬಿಜೆಪಿಯನ್ನು ಹಾಳು ಮಾಡಿದ್ದಾರೆ. ಬಿಜೆಪಿಯ ಶುದ್ಧೀಕರಣವಾಗಬೇಕು ಎಂದೆಲ್ಲ ಕೆ.ಎಸ್. ಈಶ್ವರಪ್ಪ ಅವರು ಗುಡುಗಿದ್ದರು. ಇದೀಗ ಉಪ ಚುನಾವಣೆಯ ಸಮಯದಲ್ಲಿ ಅವರು ನೀಡಿರುವ ಹೇಳಿಕೆ ಭಾರೀ ಕುತೂಹಲವನ್ನೇ ಮೂಡಿಸಿದೆ.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಮಾತನಾಡಿರುವ ಕೆ.ಎಸ್ ಈಶ್ವರಪ್ಪ ಅವರು, ಹಿಂದೂಗಳ ಪರವಾಗಿ ಯಾರು ಇದ್ದಾರೋ ಅವರಿಗೆ ಮಾತ್ರ ಮತಚಲಾಯಿಸಿ. ಇಲ್ಲದಿದ್ದರೆ ನಮ್ಮ ದೇಶವೂ ಸಹ ನೆರೆಯ ಪಾಕಿಸ್ತಾನ ಇಲ್ಲವೇ ಬಾಂಗ್ಲಾದೇಶದ ರೀತಿ ಆಗಲಿದೆ. ಅಲ್ಲಿನ ಪರಿಸ್ಥಿತಿಯೇ ನಮ್ಮಲ್ಲೂ ಬರಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಅನಾಚಾರ್ಯ ಹಾಗೂ ಅಚಾತುರ್ಯ ಹೆಚ್ಚಾಗುತ್ತಲ್ಲೇ ಇದೆ. ಮುಸ್ಲಿಂ ಸಮುದಾಯದಿಂದ ಆಗುತ್ತಿರುವ ತಪ್ಪುಗಳನ್ನು ನೋಡಿಯೂ ಈ ಕಾಂಗ್ರೆಸ್‌ನವರು ಸುಮ್ಮನೆ ಇದ್ದಾರೆ ಎಂದು ಕಿಡಿಕಾರಿದ್ದಾರೆ. ರೈತರು, ದೇವಸ್ಥಾನ ಹಾಗೂ ಪುರತತ್ವ ಇಲಾಖೆಯ ಆಸ್ತಿಗಳನ್ನು ಸಹ ಇವರು ವಕ್ಫ್ ಆಸ್ತಿ ಮಾಡಿಕೊಂಡಿದ್ದಾರೆ. ಇಷ್ಟೊಂದು ತಪ್ಪಾದರೂ ಯಾವೊಬ್ಬ ಕಾಂಗ್ರೆಸ್ ನಾಯಕನೂ ಇಲ್ಲಿಯ ವರೆಗೆ ಈ ಬಗ್ಗೆ ಮಾತನಾಡಲಿಲ್ಲ. ಅಲ್ಲದೇ ಈ ಆಸ್ತಿಗಳನ್ನು ವಕ್ಫ್ ಆಸ್ತಿ ಆಗುವುದಕ್ಕೆ ಬಿಡುವುದಿಲ್ಲ ಎಂದು ಧೈರ್ಯವಾಗಿ ಹೇಳಲಿಲ್ಲ ಎಂದು ಕಿಡಿಕಾರಿದ್ದಾರೆ.
ಇವರು (ಕಾಂಗ್ರೆಸ್ ನಾಯಕರು) ರೈತರಿಗೆ ನೀಡಿರುವ ನೋಟಿಸ್‌ಗಳನ್ನು ವಾಪಸ್ ತಗೋತೀವಿ ಅಂತ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಇದೇ ಹೇಳಿಕೆಯನ್ನೇ ಕೊಟ್ಟಿದ್ದಾರೆ. ಆದರೆ, ಯಾವುದೇ ನಾಯಕ ನಾವು ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಒಂದೇ ಒಂದು ಮಾತನ್ನೂ ಇಲ್ಲಿಯ ವರೆಗೆ ಹೇಳಿಲ್ಲ. ಇದೇ ದುರಂತ ಎಂದು ಅವರು ಹೇಳಿದ್ದಾರೆ.
ಮುಸ್ಲಿಂ ಸಮುದಾಯದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಪ್ರಸ್ತಾವನೆಯ ಬಗ್ಗೆಯೂ ಕೆ.ಎಸ್ ಈಶ್ವರಪ್ಪ ಅವರು ಕೆಂಡಕಾರಿದ್ದಾರೆ. ಇವರು ಗುತ್ತಿಗೆ ಕೆಲಸಕ್ಕೂ ಮೀಸಲಾತಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಹಿಂದೂಸ್ಥಾನವನ್ನು ಪಾಕಿಸ್ತಾನ ಮಾಡಲು ಮುಂದಾಗಿದ್ದಾರೆಯೇ, ಜನ ತಿರುಗಿಬೀಳಲಿದ್ದಾರೆ ಬಾಂಗ್ಲಾದಲ್ಲಿ ಹಲ್ಲೆಗಳು, ಕೊಲೆ ನಡೆಯಿತು. ಅಲ್ಲಿನ ಪ್ರಧಾನಿಗೆ ರಕ್ಷಣೆ ನೀಡಿದ್ದೇ ಭಾರತ. ಈ ಕಾಂಗ್ರೆಸ್‌ನವರು ಮತಕ್ಕಾಗಿ ಭಾರತವನ್ನೇ ಮತಾಂತರ ಮಾಡಲು ಮುಂದಾಗಿದ್ದಾರೆ ಎಂದು ಅವರು ದೂರಿದ್ದಾರೆ. ಹಿಂದೂ ಸಮಾಜ ದಂಗೆ ಎದ್ದರೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.












Click it and Unblock the Notifications