ಆ ಇಬ್ಬರು ರಾಜಕಾರಣಿಗಳು ನನ್ನ ಮೇಲೆ ಐದು ಕೇಸ್ ಹಾಕಿಸಿದ್ರು: ರವಿಕೃಷ್ಣಾ ರೆಡ್ಡಿ
ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷವು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದು ಗೊತ್ತೇ ಇದೆ. ಸೋಷಿಯಲ್ ಮೀಡಿಯಾದಲ್ಲಿ ಕೆಆರ್‌ಎಸ್ ಪದಾಧಿಕಾರಿಗಳ ಕಾರ್ಯವೈಖರಿ ಕಂಡು ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ತಪ್ಪನ್ನು ಪ್ರಶ್ನಿಸುವುದು, ಪೊಲೀಸರ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವ ಈ ಪಕ್ಷವು ಮುಂದಿನ ಚುನಾವಣೆಗೆ ಪ್ರಬಲವಾಗಿ ಸ್ಪರ್ಧಿಸಲು ಸಜ್ಜಾಗಿದೆ. ಕೆಆರ್‌ಎಸ್ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಇಬ್ಬರು ಪ್ರಭಾವಿ ರಾಜಕಾರಣಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಇಬ್ಬರು ಸೇರಿ ತಮ್ಮ ಮೇಲೆ ಐದು ಕೇಸ್ ದಾಖಲಿಸಿರುವುದಾಗಿ ಅವರು ತಮ್ಮ ಪಕ್ಷದ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.
'2015ರಲ್ಲಿ ನಡೆದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅಸಹಜ ಸಾವಿನ ಸಂದರ್ಭದಲ್ಲಿ ಹೋರಾಟ ಹಮ್ಮಿಕೊಂಡಿದ್ದಾಗ ನಮ್ಮ ಮೇಲೆ ದಾಖಲಾಗಿದ್ದ ಕೇಸಿನ ವಿಚಾರಣೆ ಇವತ್ತು ಇತ್ತು. ಪ್ರಕರಣ ದಾಖಲಾಗಿ ಹತ್ತೂವರೆ ವರ್ಷವಾಗಿದೆ. ಈಗಲೂ ಕೋರ್ಟಿಗೆ ಅಲೆಯುತ್ತಿದ್ದೇವೆ. ಇದಕ್ಕಿಂತ ಶಿಕ್ಷೆ ಇನ್ನೇನಿದೆ?' ಎಂದು ರವಿ ಕೃಷ್ಣರೆಡ್ಡಿ ಬೇಸರ ಹೊರಹಾಕಿದ್ದಾರೆ.

'ಆಗ ಗೃಹ ಸಚಿವ ಆಗಿದ್ದಾತ ಕೆ.ಜೆ.ಜಾರ್ಜ್, ಅವರ ನಂತರ ಗೃಹ ಸಚಿವ ಆಗಿದ್ದು ರಾಮಲಿಂಗಾರೆಡ್ಡಿ. ನನ್ನ ಮೇಲಿರುವ ಒಟ್ಟು 11 ಕೇಸ್‌ಗಳಲ್ಲಿ ಈ ಇಬ್ಬರೂ ಭ್ರಷ್ಟ ಮತ್ತು ಖದೀಮ ರಾಜಕಾರಣಿಗಳ ಪ್ರತ್ಯಕ್ಷ, ಪರೋಕ್ಷ ಪಾಲೇ ಇದೆ. ಕೆಜೆ ಜಾರ್ಜ್ ನೇರವಾಗಿ ನನ್ನ ಮೇಲೆ ಎರಡು ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದರೆ, ರಾಮಲಿಂಗಾರೆಡ್ಡಿ ತನ್ನ ಅಧಿಕಾರ ಮತ್ತು ಸರ್ಕಾರಿ ಯಂತ್ರಾಂಗವನ್ನು ದುರುಪಯೋಗಪಡಿಸಿಕೊಂಡು ಮೂರು ಕೇಸ್ ಹಾಕಿಸಿದ್ದಾರೆ' ಎಂದಿದ್ದಾರೆ.
'ನಾನು ಸ್ಥಳದಲ್ಲೇ ಇಲ್ಲದಿದ್ದ ಕೇಸ್‌ನಲ್ಲಿ ರಾಮಲಿಂಗಾರೆಡ್ಡಿ ಪ್ರಭಾವದಿಂದ ಪೊಲೀಸರು ನನ್ನ ಫಿಟ್ ಮಾಡಿದ್ದ ಕೇಸ್ ವರ್ಷದ ಹಿಂದೆಯೇ ಮುಗಿದು ನಾನು ನಿರ್ದೋಷಿ ಎಂದು ತೀರ್ಪು ನೀಡಿತು. 2018ರ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಂಡು ಹಾಕಿಸಿದ್ದ ಕೇಸ್‌ನಲ್ಲಿ ಆರೇಳು ತಿಂಗಳ ಹಿಂದೆ ಖುಲಾಸೆ ಆಗಿದ್ದೇನೆ' ಎಂದು ವಿವರ ಹಂಚಿಕೊಂಡಿದ್ದಾರೆ.
'ಪುಕ್ಕಲರು ಕೆಆರ್‌ಎಸ್‌ಗೆ ಬರಲ್ಲ'
'ನನ್ನ ಕೇಸ್‌ನ ವಿಚಾರಗಳ ಕುರಿತು ಹೆಚ್ಚಿಗೆ ಮಾತನಾಡಬಾರದು. ಅದು ಪಕ್ಷಕ್ಕೆ ಅಥವಾ ಹೋರಾಟಗಳಿಗೆ ಬರುವವರನ್ನು ನಿರುತ್ತೇಜಿಸುತ್ತದೆ ಅಥವ ಭಯಗೊಳಿಸುತ್ತದೆ ಎಂಬ ಭಾವನೆಯಲ್ಲಿ ಇಷ್ಟು ದಿನ ಈ ವಿಚಾರಗಳನ್ನು ಹೆಚ್ಚು ಪ್ರಸ್ತಾಪಿಸುತ್ತಿರಲಿಲ್ಲ. ಆದರೆ ಕೆಆರ್‌ಎಸ್ ಪಕ್ಷಕ್ಕೆ ಬರುವವರು ಪುಕ್ಕಲರಲ್ಲ ಮತ್ತು ಇಲ್ಲಿಗೆ ಬಂದವರು ಪುಕ್ಕಲುತನ ಕಳೆದುಕೊಂಡು ಧೈರ್ಯವಂತರಾಗಿದ್ದಾರೆ ಎಂದು ಈಗ ಖಾತ್ರಿ ಆಗಿರುವುದರಿಂದ, ಈ ವಿಚಾರಗಳನ್ನು ಹೇಳುವುದು ಒಳ್ಳೆಯದೇ ಎಂದು ಅರಿವಾಗಿದೆ' ಎಂದಿದ್ದಾರೆ.
'ನನ್ನ ಮೇಲಾಗಲಿ, ಕೆಆರ್‌ಎಸ್ ಪಕ್ಷದವರ ಮೇಲಾಗಲಿ ಸುಳ್ಳು ಕೇಸ್ ದಾಖಲಿಸಿ ಕಿರುಕುಳ ಕೊಟ್ಟವರಿಗೆ, ಹಲ್ಲೆ ಮಾಡಿದವರಿಗೆ ಅಂಥದ್ದೇನೂ ಒಳ್ಳೆಯದಾಗಿಲ್ಲ. ಅನೇಕರು ಸ್ಥಾನ ಮತ್ತು ಮಾನ ಎರಡನ್ನೂ ಕಳೆದುಕೊಂಡಿದ್ದಾರೆ. ನಮಗೂ ಸಹ ಏನೋ ಒಳ್ಳೆಯದಾಗಿದೆ ಅಂತಲೂ ಇಲ್ಲ. ನಮಗೆ ನ್ಯಾಯ ಸಿಗದೇ ಇದ್ದರೂ, ನಮಗೆ ಅನ್ಯಾಯ ಮಾಡಿದವರು ಮಣ್ಣುಮುಕ್ಕುತ್ತಲೇ ಇದ್ದಾರೆ. ಅವರಲ್ಲಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ದೊಡ್ಡ ಪಟ್ಟಿಯೇ ಇದೆ. ಪಕ್ಷದವರ ಬಗ್ಗೆ ಅಸಹನೆ ಮತ್ತು ದ್ವೇಷ ಇಟ್ಟುಕೊಂಡಿರುವ, ಅಧಿಕಾರದ ಮದದಿಂದ ಮೆರೆಯುವ ಭ್ರಷ್ಟ ಮತ್ತು ದುಷ್ಟ ರಾಜಕಾರಣಿಗಳು ಮತ್ತು ಪೊಲೀಸರೂ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಯಾರಾದರೂ ಇದನ್ನು ಓದಿದರೆ ಈ ವಿಚಾರವನ್ನು ಸ್ವಲ್ಪ ಗಮನಿಸಲಿ ಎಂದು ಆಶಿಸುತ್ತೇನೆ' ಎಂದು ಹೇಳಿದ್ದಾರೆ.












Click it and Unblock the Notifications