KRS & Kabini Dam: ಕೆಆರ್ಎಸ್, ಕಬಿನಿ ಒಳಹರಿವು ಅಲ್ಪ ಕುಸಿತ; ಮೆಟ್ಟೂರು ಜಲಾಶಯದ ಒಳಹರಿವು ಎಷ್ಟಿದೆ?
ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳ ಗತ ವೈಭವ ಮರುಕಳಿಸುತ್ತಿದೆ. ಜುಲೈನಲ್ಲೇ ರಾಜ್ಯದ ಹಲವು ಡ್ಯಾಂಗಳು ಅರ್ಧದಷ್ಟು ತುಂಬಿದ್ದು, ಮಳೆ ಪ್ರಮಾಣ ಹೆಚ್ಚಾದರೆ ಶೀಘ್ರದಲ್ಲೇ ತುಂಬುವ ಸಾಧ್ಯತೆ ಇದೆ.
ಕಾವೇರಿ ನದಿ ಪಾತ್ರದಲ್ಲಿ ಕೂಡ ಉತ್ತಮ ಮಳೆಯಾಗುತ್ತಿದ್ದು, ಕೆಆರ್ ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಿಗೆ ಉತ್ತಮ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದು ತಮಿಳುನಾಡಿಗೂ ಕೂಡ ಅನುಕೂಲವಾಗಿದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಮೆಟ್ಟೂರು ಜಲಾಶಯ ತಮಿಳುನಾಡಿನ ಪ್ರಮುಖ ಜಲಾಶಯಗಳಲ್ಲಿ ಒಂದಾಗಿದೆ. ಮೆಟ್ಟೂರು ಜಲಾಶಯಕ್ಕೂ ಒಳಹರಿವು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಕಬಿನಿ, ಕೆಆರ್ಎಸ್ ಒಳಹರಿವು ಎಷ್ಟಿದೆ
ಭಾನುವಾರ ಮಧ್ಯಾಹ್ನದ ವೇಳೆಗೆ ಕಬಿನಿ ಮತ್ತು ಕೆಆರ್ ಎಸ್ ಜಲಾಶಯದ ಒಳಹರಿವು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೆಆರ್ ಎಸ್ ಜಲಾಶಯಕ್ಕೆ ಸದ್ಯ 7500 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಕಬಿನಿ ಜಲಾಶಯಕ್ಕೆ 5000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ.
ಕಬಿನಿ ಜಲಾಶಯದ ಒಳಹರಿವು 5000 ಕ್ಯೂಸೆಕ್ಸ್ ಇದ್ದು, 3250 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಪ್ರಸ್ತುತ ನೀರಿನ ಮಟ್ಟ 2281.56 ಅಡಿ ಆಗಿದ್ದು, ಗರಿಷ್ಠ ಮಟ್ಟ 2284 ಅಡಿಗಳಾಗಿದೆ. ಜಲಾಶಯ ತುಂಬಲು ಇನ್ನು 2.5 ಅಡಿ ಮಾತ್ರ ಬಾಕಿ ಉಳಿದಿದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 17.97 ಟಿಎಂಸಿ ನೀರು ಸಂಗ್ರಹವಾಗಿದೆ.
ಕೆಆರ್ ಎಸ್ ಜಲಾಶಯದ ಒಳಹರಿವು ಸದ್ಯ 7000 ಕ್ಯೂಸೆಕ್ಸ್ ಇದ್ದು, 562 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ 124.80 ಅಡಿ ಜಲಾಶಯದಲ್ಲಿ 102 ಅಡಿ ನೀರು ಸಂಗ್ರವಾಗಿದೆ. 49.452 ಟಿಎಂಸಿ ಸಂಗ್ರಹ ಸಾಮರ್ಥ್ಯವಿದ್ದು, 24.417 ಟಿಎಂಸಿ ನೀರು ಇದೆ.
ಮೆಟ್ಟೂರು ಜಲಾಶಯದ ಒಳಹರಿವು ಎಷ್ಟಿದೆ?
ಭಾನುವಾರ ಮೆಟ್ಟೂರು ಜಲಾಶಯದ ನೀರಿನ ಒಳಹರಿವಿನ ಮಟ್ಟ 2832 ಕ್ಯೂಸೆಕ್ಸ್‌ಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚಾಗಲಿದೆ. 120 ಅಡಿ ಜಲಾಶಯದ ಗರಿಷ್ಠ ಮಟ್ಟವಾಗಿದ್ದು, ಸದ್ಯ 40.05 ಅಡಿ ನೀರು ಸಂಗ್ರಹವಾಗಿದೆ. ಕುಡಿಯುವ ನೀರಿಗಾಗಿ 1000 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತದೆ.












Click it and Unblock the Notifications